ಉಡುಪಿ, ಆ 10 (DaijiworldNews/MS): ಸಚಿವ ಕೆ.ಎಸ್.ಈಶ್ವರಪ್ಪ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದು ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಅವಾಚ್ಯ ಶಬ್ದ ಬಳಸಿದ್ದು ಮಾತ್ರವಲ್ಲದೆ ಕಾಂಗ್ರೆಸ್ನವರು ಕುಡುಕರು ಎಂದು ಹೇಳಿರುವುದು ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಾಗಿ ಈಶ್ವರಪ್ಪ ವಿರುದ್ದ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಕಿಡಿಕಾರಿದ್ದು, ಬಿಜೆಪಿಗರೇ ಶೀಘ್ರ ಈಶ್ವರಪ್ಪರಿಗೆ ಚಿಕಿತ್ಸೆ ಕೊಡಿಸಿ, ಇಲ್ಲವಾದರೆ ಅನಾಹುತವಾದಿತು. ವಿಧಾನಸೌಧಕ್ಕೆ ಬಹಳ ಪಾವಿತ್ರ್ಯತೆ ಇದ್ದು ಈಶ್ವರಪ್ಪ ಒಬ್ಬ ಅನಾಗರೀಕ ವ್ಯಕ್ತಿ ಎಂದು ಹೇಳಿದ್ದಾರೆ.
ಸಚಿವ ಈಶ್ವರಪ್ಪನವರು ಆಡಿದ ಮಾತು ಅವಾಚ್ಯ ಮತ್ತು ಅವಹೇಳನಕಾರಿ. ಅವರ ಮೆದುಳಿನ ಸಮತೋಲನ ತಪ್ಪಿದೆ. ಬಿಜೆಪಿ ಅವರ ಮೆದುಳಿನ ಪರೀಕ್ಷೆ ಮಾಡಿಸಬೇಕು. ತಲೆಯ ಪರೀಕ್ಷೆ ನಡೆಸದಿದ್ದರೆ ಮುಂದೆ ರಾಜ್ಯಕ್ಕೆ ಆಗಬಹುದಾದ ಅನಾಹುತ ಎದುರಿಸಬೇಕಾದೀತು ಎಂದರು. ಕೂಡಲೇ ಈಶ್ವರಪ್ಪ ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆಗಾಗ ಇದು ಸಾಬೀತಾಗುತ್ತಿದೆ. ಶೀಘ್ರ ಈಶ್ವರಪ್ಪರಿಗೆ ಚಿಕಿತ್ಸೆ ಕೊಡಿಸಿ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಚಿವ ವಿನಯ್ ಕುಮಾರ ಸೊರಕೆ ಸಲಹೆ ನೀಡಿದರು.