ವಿಟ್ಲ, ಅ 25(SM): ಕೊಳ್ನಾಡು ಗ್ರಾಮ ಪಂಚಾಯಿತಿ ನಿಷೇಧಿಸಿರುವ ಜಾಗದಲ್ಲಿ ಮೀನು ಮಾರಾಟ ಮಾಡಿದವರ ಮೇಲೆ ದಂಡ ವಿಧಿಸಿದ ವಿಚಾರದಿಂದ ಆಕ್ರೋಶಿತಗೊಂಡ ಮೀನು ವ್ಯಾಪಾರಿಗಳ ಬೆಂಬಲಿಗರು ಗ್ರಾಮ ಪಂಚಾಯಿತಿ ಬಳಿ ಜಮಾಯಿಸಿ ಭೀತಿಯನ್ನುಂಟು ಮಾಡಿದ ಘಟನೆ ಗುರುವಾರ ನಡೆದಿದೆ.
ಕೊಳ್ನಾಡು ಗ್ರಾಮ ಪಂಚಾಯಿತಿಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವರ್ಷಗಳ ಹಿಂದೆ 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲಾಗಿತ್ತು. ಹಿಂದೆ ಸಾಲೆತ್ತೂರು ಪೇಟೆಯ ಸುತ್ತಮುತ್ತಲಿನಲ್ಲಿ ಮೀನು ಮಾರಾಟ ಮಾಡಲಾಗುತ್ತಿತ್ತು. ಹೊಸ ಮಾರುಕಟ್ಟೆ ನಿರ್ಮಾಣಗೊಂಡ ಬಳಿಕ ಸಾಲೆತ್ತೂರು ಮೈದಾನ, ಬಾಪಕುಂಞ ಅಂಗಡಿ ಪ್ರದೇಶ ಮತ್ತು ಸರ್ವೋದಯ ಶಾಲೆ ವರೆಗಿನ ಪ್ರದೇಶದಲ್ಲಿ, ರಸ್ತೆಯ ಬದಿಗಳಲ್ಲಿ ತಳ್ಳುಗಾಡಿ, ಮೋಟರು ವಾಹನ, ಅಥವಾ ಬೇರೆ ಯಾವುದೇ ರೂಪದಲ್ಲಿ ಮೀನು ಮಾರಾಟ ನಿಷೇಧಿಸಲಾಗಿತ್ತು.
ಆದರೆ, ಕಳೆದ ಕೆಲವು ದಿನಗಳಿಂದ ಬಾಪಕುಂಞ ಅಂಗಡಿ ಬಳಿ ಹಸಿಮೀನು ಮಾರಾಟ ಮತ್ತೆ ಆರಂಭಗೊಂಡಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಮಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮೀನು ವ್ಯಾಪಾರಿಗಳ ಬೆಂಬಲಿಗರು ಗ್ರಾಮ ಪಂಚಾಯಿತಿಗೆ ತೆರಳಿದ್ದಾರೆ. ಕೊಳ್ನಾಡು ಗ್ರಾಮ ಪಂಚಾಯಿತ್ ಮೀನಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗೀ ಬಂದೋಬಸ್ತ್ ಏರ್ಪಡಿಸಿದ್ದಾರೆ. ಬಳಿಕ ಇತ್ತಂಡದ ನಡುವೆ ಮಾತುಕತೆ ನಡೆಸಲಾಗಿದ್ದು, ವಿಫಲಗೊಂಡಿದ್ದರಿಂದ ವಾಹನ ಹಾಗೂ ಮೀನು ಬಾಕ್ಸ್ಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಬೀದಿ ಬದಿ ವ್ಯಾಪಾರ ತಪ್ಪಿಸುವ ಹಾಗೂ ನೈರ್ಮುಲ್ಯ ಕಾಪಾಡುವ, ಪಂಚಾಯಿತಿನ ಆದಾಯ ಹೆಚ್ಚಿಸುವ ಉದ್ದೇಶದಿಂದ ಮೀನು ಮಾರುಕಟ್ಟೆ ನಿರ್ಮಿಸಲಾಗಿತ್ತು. ನಿಷೇಧಿತ ಪ್ರದೇಶ ಎಂದು ನಾಮಫಲಕ ಅಳವಡಿಸಲಾಗಿದೆ. ಹಲವು ಮಂದಿ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಒಬ್ಬರು ಮಾತ್ರ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡುವಂತೆ ಹಲವು ಬಾರಿ ವಿನಂತಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿತ್ತು. ಇದೀಗ ಗ್ರಾಮ ಪಂಚಾಯಿತಿ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂರು ತಿಳಿಸಿದ್ದಾರೆ.