ಬೆಂಗಳೂರು, 25(SM): ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2017ನೇ ಸಾಲಿನ ಪ್ರತಿಷ್ಟಿತ ರಾಜ್ಯ ಪ್ರಶಸ್ತಿ ಪ್ರಕಟಗೊಂಡಿದ್ದು, ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರವಾಗಿ ಸೋಫಿಯಾ ಆಯ್ಕೆಯಾಗಿದೆ.
ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ 121 ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ ಅರ್ಹತೆ ಹೊಂದಿದ್ದ 121 ಚಲನಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಸಮಿತಿ ಪ್ರಶಸ್ತಿಗಾಗಿ ಅಂತಿಮಗೊಳಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರ 'ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ' ಪ್ರಶಸ್ತಿ ಪಡೆದುಕೊಂಡಿದೆ. 'ಮಂಜರಿ' ಚಿತ್ರದ ಅಭಿನಯಕ್ಕಾಗಿ ವಿಶೃತ್ ನಾಯ್ಕ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆದಿದ್ದಾರೆ. ಇನ್ನೂ 'ಹೆಬ್ಬೆಟ್ ರಾಮಕ್ಕ' ಚಿತ್ರದ ನಟನೆಗಾಗಿ ನಟಿ ತಾರಾ ಅನುರಾಧಾ 'ಅತ್ಯುತ್ತಮ ನಟಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇನ್ನುಳಿದಂತೆ ‘ಶುದ್ಧಿ’ ಸಿನಿಮಾ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ‘ಮಾರ್ಚ್ - 22’ ಚಿತ್ರ 2ನೇ ಅತ್ಯುತ್ತಮ ಚಿತ್ರಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಶೇಷ ಸಾಮಾಜಿಕ ಕಾಳಜಿಯನ್ನು ಹೊಂದಿದ ಪುರಸ್ಕಾರಕ್ಕೆ ‘ಹೆಬ್ಬೆಟ್ ರಾಮಕ್ಕ’ ಸಿನಿಮಾ ಆಯ್ಕೆಯಾಗಿದೆ. ಮಾಸ್ಟರ್ ಕಾರ್ತಿಕ್ ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.