ಬೆಂಗಳೂರು, ಅ 25(SM): ಕನ್ನಡ ಚಿತ್ರ ನಟಿ ಶೃತಿ ಹರಿಹರನ್ ಅವರು ಹಿರಿಯ ನಟ ಅರ್ಜುನ್ ಸರ್ಜಾ ಅವರ ಮೇಲೆ ಮಾಡಿದ್ದ ಲೈಂಗಿನ ದೌರ್ಜನ್ಯ ಆರೋಪ ವಿವಾದ ಕುರಿತು ನಡೆಸಿದ್ದ ಸಂಧಾನಸಭೆ ವಿಫಲಗೊಂಡಿದೆ. ನಟಿ ಶೃತಿ ಹರಿಹರನ್ ಅವರು ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಡೆಸಿದ ಆರೋಪಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆ ಫಿಲಂ ಛೇಂಬರ್ ಸಂಧಾನ ಸಭೆಯನ್ನು ಆಯೋಜಿಸಿತ್ತು.
ಕನ್ನಡದ ಹಿರಿಯ ನಟ ಅಂಬರೀಶ್, ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕರ ಸಂಘದ ಮುನಿರತ್ನ, ರಾಕ್ಲೈನ್ ವೆಂಕಟೇಶ್, ಸಾ.ರಾ.ಗೋವಿಂದ್ ಅವರ ನೇತೃತ್ವದಲ್ಲಿ ಸಂಧಾನ ಸಭೆ ಆಯೋಜಿಸಲಾಗಿತ್ತು.
ಅದರಲ್ಲಿ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಕೂಡ ಭಾಗವಹಿಸಿದ್ದರು. ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರೂಪಾಯಿಗಳನ್ನು ಆಗ್ರಹಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ಹಿನ್ನೆಲೆ ನಾವು ಮಾತುಕತೆ ನಡೆಸಿದ್ದೇವೆ. ಇಬ್ಬಿರಿಗೂ ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ್ದೇವೆ ಎಂದು ಸಂಧಾನ ಸಭೆ ಬಳಿಕ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರೂ ಪರಸ್ಪರ ವಿವಾದ ಮರೆತು ಅನ್ಯೋನ್ಯದಿಂದ ಇರಬೇಕೆಂದು ಸಂಧಾನ ಸಭೆ ಆಯೋಜಿಸಲಾಗಿತ್ತು.
ಇಬ್ಬರೂ ತಮ್ಮ ಪರವಾದ ವಾದಗಳನ್ನು ಮಂಡಿಸಿದ್ದಾರೆ. ಇನ್ನಷ್ಟು ಸಮಯ ಪಡೆದು ಕುಟುಂಬದ ಜೊತೆ ಚರ್ಚಿಸಿ ಉತ್ತಮ ನಿರ್ಣಯಕ್ಕೆ ಬನ್ನಿ ಎಂದು ಸಲಹೆ ನೀಡಿದ್ದಾಗಿ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.