ಕಾಸರಗೋಡು, ಅ 25(SM): ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ನ ಗೆಲುವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ದೂರಿನ ವಿಚಾರಣೆ ಮುಂದುವರಿಸಬೇಕೇ ಎಂದು ಹೈಕೋರ್ಟ್ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರನ್ನು ಪ್ರಶ್ನಿಸಿದೆ. ಅಲ್ಲದೆ ಎರಡು ದಿನಗಳೊಳಗೆ ಉತ್ತರ ನೀಡುವಂತೆ ತಿಳಿಸಿದೆ.
2016ರಲ್ಲಿ ನಡೆದ ಚುನಾವಣೆಯಲ್ಲಿ ಕೆ. ಸುರೇಂದ್ರನ್ ಯುಡಿಎಫ್ ನ ಪಿ.ಬಿ. ಅಬ್ದುಲ್ ರಜಾಕ್ ವಿರುದ್ಧ 89 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಕಲಿ ಮತದಾನದಿಂದ ಅಬ್ದುಲ್ ರಜಾಕ್ ಗೆಲುವು ಸಾಧಿಸಿದ್ದಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತನ್ನನ್ನು ವಿಜಯಿ ಎಂದು ಘೋಷಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ, ನಕಲಿ ಮತದಾನ ಮಾಡಿದ್ದಾರೆಂದು ಆರೋಪಿಸಿ 259ರಷ್ಟು ಮಂದಿಯ ಹೆಸರನ್ನು ಹೈಕೋರ್ಟ್ ಗೆ ನೀಡಿದ್ದರು.
ಈ ಪೈಕಿ 191 ಮಂದಿಯಿಂದ ಈಗಾಗಲೇ ಮಾಹಿತಿ ಕಲೆ ಹಾಕಿದ್ದು, 67 ಮಂದಿ ಇನ್ನಷ್ಟೇ ಕೋರ್ಟ್ ಗೆ ಹಾಜರಾಗಬೇಕಿದೆ. ಶಾಸಕ ಪಿ. ಬಿ. ಅಬ್ದುಲ್ ರಜಾಕ್ ರವರ ನಿಧನದಿಂದ ಸುರೇಂದ್ರನ್ ರವರ ಮುಂದಿನ ನಿಲುವು ಏನೆಂಬುದು ಇದೀಗ ಕೂತುಹಲವಾಗಿದೆ.
ದೂರು ಹಿಂತೆಗೆದುಕೊಳ್ಳುವುದಾಗಿ ಸುರೇಂದ್ರನ್ ತಿಳಿಸಿದ್ದಲ್ಲಿ ಹಾಗೂ ಬೇರೆ ದೂರುಗಳಿಲ್ಲದಿದ್ದಲ್ಲಿ ಗಜೆಟ್ ಪ್ರಕಟಣೆ ನೀಡಿ ಮುಂದಿನ ಪ್ರಕ್ರಿಯೆ ನಡೆಸಲಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 31ರ ಬುಧವಾರಕ್ಕೆ ಮುಂದೂಡಿದೆ.
ಇನ್ನು ಮಂಜೇಶ್ವರ ಕ್ಷೇತ್ರದ ಶಾಸಕರಾಗಿದ್ದ ಅಬ್ದುಲ್ ರಜಾಕ್ ಅಕ್ಟೋಬರ್ 27ರಂದು ನಿಧನಹೊಂದಿದ್ದರು. ಈ ಹಿನ್ನೆಲೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.
ಕೇಸು ಮುಂದುವರಿಸಿಕೊಂಡು ಹೋದಲ್ಲಿ ಉಪಚುನಾವಣೆ ವಿಳಂಬಗೊಳ್ಳಲಿದೆ.