ಉಡುಪಿ ಅ 10:ಅಜ್ಜನ ಮನೆಗೆ ಬಂದ ಮೊಮ್ಮಗ ನಾನು. ಕಾರಂತರೆಂದರೆ ಬರೆದಂತೆ ಜೀವಿಸಿದವರು- ಜೀವಿಸಿದ್ದನ್ನು ಬರೆದವರು ಒಂದು ವೇಳೆ ನಾನು ನಿಮ್ಮ ಪ್ರೀತಿಯ ಅಂತಕರಣವನ್ನು ಕಸಿವಿಸಿ ಮಾಡಿದ್ದರೆ ಕ್ಷಮಿಸಿಬಿಡಿ ಎಂದು ಪ್ರಕಾಶ್ ರೈ ಕ್ಷಮೆ ಯಾಚಿಸಿದರು. ಮಂಗಳವಾರ ಸಂಜೆ ಕೋಟ ಡಾ. ಕಾರಂತ ಥೀಮ್ ಪಾರ್ಕನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನೀಡುವ "ಡಾ. ಕಾರಂತ ಹುಟ್ಟೂರ ಪ್ರಶಸ್ತಿ" ಯನ್ನು ಸ್ವೀಕರಿಸಿ ಮಾತನಾಡಿದ ಬಹುಭಾಷಾ ನಟ, ನನಗೆ ಬಹಳಷ್ಟು ಪ್ರಶಸ್ತಿಗಳಿಗೆ ಕರೆ ಬಂದಿದೆ ಆದರೆ ಕಾರಂತ ಪ್ರಶಸ್ತಿ ನೀಡಿದ ಆನಂದ ಬೇರೆ, ಇದನ್ನು ಮೊದಲು ಅಮ್ಮನಿಗೆ ಹೇಳಿ ಸಂತೋಷಪಟ್ಟೆ. ಪ್ರಶಸ್ತಿ ಸ್ವೀಕರಿಸಿದಾಗ ಅಜ್ಜನ ಮನೆಗೆ ಬಂದ ಮೊಮ್ಮಗನ ಸಂತೋಷ ನನ್ನದಾಗಿದೆ.. ಕಾರಂತರ ಬಗ್ಗೆ ಮಾತನಾಡೋವಾಗ ನನಗೆ ರೋಮಾಂಚನ, ಅವರು ಬರೆದ ಹಾಗೆ ಬದುಕಿದವರು, ಬದುಕಿದ್ದನ್ನೇ ಬರೆದರು. ನನ್ನ ತಲೆಮಾರಿಗೆ ಕಾರಂತರ ಬರವಣಿಗೆ ಬಹುವಾಗಿ ಕಾಡಿತ್ತು ಕಾಡು , ಅರಣ್ಯವನ್ನು ಪರಿಚಯವಾಗಿದ್ದು ನನಗೆ ಅವರ ಸಾಹಿತ್ಯದಿಂದ ಎಂದು ಇದೇ ಸಂದರ್ಭ ತಿಳಿಸಿದರು.
ಉಡುಪಿ, ದ.ಕ ದಲ್ಲಿ ಸಿಕ್ಕ ಸ್ವಾಗತ ನೋಡಿ ಸಂತೋಷ ಆಗಿದೆ. ಎಡ ಬಲ ಎನ್ನುವ ಹೋರಾಕ್ಕಿಂತಲೂ ನೆಮ್ಮದಿಯ ಸಮಾಜಕ್ಕಾಗಿ ಹೋರಾಟವಾಗಬೇಕು, ವಾಕ್ ಸ್ವತಂತ್ರ್ಯ, ಭಯ ರಹಿತ ಸಮಾಜ ನಿರ್ಮಾಣದ ಅವಶ್ಯಕತೆ ಈಗಿನ ಸಮಾಜಕ್ಕಿದೆ . ಹಾಗಾಗಿ ಸಮಾಜಕ್ಕೆ ದ್ರೋಹ ಮಾಡದಿದ್ದರೆ ಅಂಜುವ ಅಗತ್ಯವಿಲ್ಲ, ಎಂದು ಕಾರಂತಜ್ಜ ಹೇಳಿದ್ದಾರೆ ನಾನು ಅವರ ಮೊಮ್ಮಗ ಅದನ್ನೇ ಪಾಲಿಸುವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು . "ಡಾ. ಕಾರಂತ ಹುಟ್ಟೂರ ಪ್ರಶಸ್ತಿ"ಯಲ್ಲಿ ಪ್ರಶಸ್ತಿ, ಹಾರ, ಹಣ್ಣುಹಂಪಲು, ಬೆಳ್ಳಿ ಫಲಕವನ್ನು ಒಳಗೊಂಡಿದೆ.
ಕೋಟತಟ್ಟು ಗ್ರಾಮಪಂಚಾಯತಿ ಅಧ್ಯಕ್ಷರಾದ ಪ್ರಮೋದ್ ಹಂದೆ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ,ದ.ಕ ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಕಾರ್ಯಕ್ರಮವನ್ನು ಉದ್ಘಾಟಿಸಿದರುಸಿನೆಮಾ ನಿರ್ದೇಶಕ ಜಿ ಗುರುಮೂರ್ತಿ,ಸಾಲಿಗ್ರಾಮ ಟೌನ್ ಪಂಚಾಯತ್ ಅಧ್ಯಕ್ಷರಾದ ರತ್ನ ನಾಗರಾಜ್,ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವನಿತ ಶ್ರೀಧರ್ ಅಚಾರ್ಯ ಹಾಗೂ ತಾಲೂಕು ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಮೋಹನ್ ರಾಜ್ ಉಪಸ್ಥಿತರಿದ್ದರು.