ಗುಜರಾತ್,ಅ 25 (MSP): ಗುಜರಾತಿನ ಸೂರತ್ ಮೂಲದ ಉದ್ಯಮಿಯೋರ್ವರು ತನ್ನ ನೌಕರರಿಗೆ ದೀಪಾವಳಿ ಹಬ್ಬದ ಬಂಪರ್ ಗಿಫ್ಟ್ ಘೋಷಿಸಿದ್ದಾರೆ. ದೀಪಾವಳಿಯ ಬೋನಸ್ ರೂಪದ ಗಿಫ್ಟ್ ನ್ನು ನೌಕರರಿಗೆ ಪ್ರಧಾನಿ ನರೇಂದ್ರ ಮೋದಿಯವರು ಹಸ್ತಾಂತರಿಸಲಿದ್ದಾರೆ.
ಹರಿಕೃಷ್ಣ ಎಕ್ಸ್ ಪೋರ್ಟ್ಸ್ ಕಂಪನಿ, ತನ್ನ 600 ಮಂದಿ ನೌಕರರಿಗೆ ಕಾರನ್ನು ಉಡುಗೊರೆಯಾಗಿ ನೀಡುತ್ತಿದ್ದು ಈ ಹಿನ್ನಲೆಯಲ್ಲಿ ಆದ್ದೂರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಕಂಪನಿಯ ಇಬ್ಬರು ಮಹಿಳಾ ನೌಕರರಿಗೆ ಸಾಂಕೇತಿಕವಾಗಿ ಕಾರಿನ ಕೀಗಳನ್ನು ಹಸ್ತಾಂತರಿಸಲಿದ್ದಾರೆ.
ಹರಿಕೃಷ್ಣ ಎಕ್ಸ್ ಪೋರ್ಟ್ಸ್ ಕಂಪನಿ ಮಾಲೀಕ ಸಾವಜಿ ದೊಲಕಿಯಾ, ಕಳೆದ ಹಲವಾರು ವರ್ಷಗಳಿಂದ ತಮ್ಮ ನೌಕರರಿಗೆ ದೀಪಾವಳಿಯಂದು ಕಾರು, ಫ್ಲಾಟ್ ಸೇರಿದಂತೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸುಮಾರು 600 ಮಂದಿ ನೌಕರರಿಗೆ ಸುಜುಕಿ ಆಲ್ಟೊ ಹಾಗೂ ಸೆಲೆರಿಯೋ ಕಾರುಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
ಬೋನಸ್ ನೀಡುವ ಕುರಿತು, ಮಾತನಾಡಿರುವ ಧೋಲ್ಕಿಯಾ, ನನಗೆ ನಮ್ಮ ಸಂಸ್ಥೆಯ ಉದ್ಯೋಗಿಗಳ ಕುರಿತು ಹೆಮ್ಮೆ ಇದೆ. ನಮ್ಮ ಸಂಸ್ಥೆ ದೇಶವಿದೇಶದಲ್ಲಿ ಹೆಸರುಗಳಿಸಲು ಇವರೇ ಕಾರಣ. ನಾವು ನೀಡುತ್ತಿರುವ ಉಡುಗೊರೆಗೆ ಇವರೆಲ್ಲರೂ ಅರ್ಹರಾಗಿದ್ದಾರೆ. ನಮ್ಮ ಸಂಸ್ಥೆಯ ಏಳಿಗೆಗಾಗಿ ಪ್ರಾಮಾಣಿಕವಾಗಿ ಅವರು ದುಡಿದಿದ್ದಾರೆ. ಅವರ ಕೆಲಸಕ್ಕೆ ತಕ್ಕದಾದ ಉಡುಗೊರೆ ನೀಡಬೇಕಿರುವುದು ನಮ್ಮ ಧರ್ಮ' ಎಂದು ಹೇಳಿದ್ದಾರೆ. ಇನ್ನು ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರೊಬ್ಬರು ಮಾತನಾಡಿ ಬೋನಸ್ ರೂಪದಲ್ಲಿ ನೀಡುವ ಉಡುಗೊರೆಗಳನ್ನು ನಾವು ಹಣದಿಂದ ಅಳೆಯುವುದಿಲ್ಲ. ಅದು ನಮ್ಮ ಮತ್ತು ಮಾಲೀಕರ ನಡುವಿನ ಬಾಂಧವ್ಯದ ಸಂಕೇತ ಎಂದು ಹೇಳಿದ್ದಾನೆ. ಧೋಲ್ಕಿಯಾ ಅವರ ಶ್ರೀಕೃಷ್ಣ ಎಕ್ಸ್ಪೋರ್ಟ್ ಸಂಸ್ಥೆಯು ವಜ್ರಾಭರಣಗಳಿಗಾಗಿಯೇ ಖ್ಯಾತಿಗಳಿಸಿದ್ದು, ಇವರ ಈ ಸಂಸ್ಥೆಯು ಹಾಂಕ್ಕಾಂಗ್, ಬೆಲ್ಜಿಯಂ, ಅಮೆರಿಕ ಮತ್ತು ಚೀನಾದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ.