ಬೆಳ್ತಂಗಡಿ, ಆ 07 (DaijiworldNews/MS): ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದ ಕಾರಣ ವ್ಯಕ್ತಿಯೊಬ್ಬರು ಮೃತರಾದ ಘಟನೆ ಆ. 07 ರ ಶನಿವಾರ ಪದ್ಮುಂಜ ಗ್ರಾಮದ ಪೊಯ್ಯ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಕೂಲಿ ಕಾರ್ಮಿಕ ನಾಣ್ಯಪ್ಪ ಪೂಜಾರಿ (55) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಬೆಳಗ್ಗೆ 6.30 ಕ್ಕೆ ಉಪ್ಪಿನಂಗಡಿಯಲ್ಲಿನ ಕೋಳಿ ಅಂಗಡಿಗೆ ಕೆಲಸಕ್ಕೆಂದು ತೆರಳುವ ಸಂದರ್ಭ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ.
ವಿದ್ಯುತ್ ವಯರ್ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಅವರ ಕಾಲಿಗೆ ತಗುಲಿ ಘಟನೆ ನಡೆದಿದೆ. ಸ್ಥಳೀಯರು ಇದನ್ನು ಗಮನಿಸಿ ಮನೆಯವರಿಗೆ ವಿಷಯ ತಿಳಿಸಿದ್ದಾರೆನ್ನಲಾಗಿದೆ.
ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರ ಸೇರಿ ಕುಟುಂಬಸ್ಥರನ್ನು ಅಗಲಿದ್ದಾರೆ.