ಕಾರ್ಕಳ, ಆ 04 (DaijiworldNews/PY): ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗುಲ್ವಾಡಿಯ ಇಮ್ರಾನ್ (24) ಎಂದು ಗುರುತಿಸಲಾಗಿದ್ದು, ಈತನ ವಿರುದ್ದ ಪೋಕ್ಸೋ ಮತ್ತು ಐ .ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರು ಬಂದಿದ್ದು, ಅದರಂತೆ ಅಪ್ರಾಪ್ತ ಬಾಲಕಿಯ ಮನೆಗೆ ಭೇಟಿನೀಡಿ ಆಪ್ತ ಸಮಾಲೋಚನೆ ನಡೆಸಲಾಗಿದ್ದು, 12 ವರ್ಷದ ಬಾಲಕಿಗೆ ಇಮ್ರಾನ್ ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ಗಮನಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಮಧು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆಪ್ತಸಮಾಲೋಚಕಿ ಅಂಬಿಕಾ, ಸಮಾಜಕಾರ್ಯಕರ್ತ ಯೋಗೀಶ್, ಕಾರ್ಕಳ ನಗರ ಠಾಣಾ ಸಿಬ್ಬಂದಿಗಳಾದ ಶ್ಯಾಮ್, ರವೀಂದ್ರ ಇನ್ನಿತರರು ಭಾಗವಹಿಸಿದ್ದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಅಪ್ರಾಪ್ತ ಬಾಲಕಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಾಗಿದೆ.