ಹೊಸಪೇಟೆ,ಅ 24 (MSP): ಬಳ್ಳಾರಿ ಉಪ ಚುನಾವಣೆಯ ಕಣ ರಂಗೇರಿದ್ದು, ಬಿಜೆಪಿಯಿಂದ ಜೆ. ಶಾಂತಾ ಹಾಗೂ ಕಾಂಗ್ರೆಸ್ ನಿಂದ ವಿ.ಎಸ್ ಉಗ್ರಪ್ಪ ಕಣಕ್ಕೆ ಇಳಿದಿದ್ದು, ಪಕ್ಷದ ಪ್ರಚಾರದ ವೇಳೆ ಉಭಯ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದ್ದಾರೆ. ಹೊಸಪೇಟೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ. ಶ್ರೀರಾಮುಲು ಮಾಡಿದ ತಪ್ಪಿನಿಂದ ಬಳ್ಳಾರಿಯಲ್ಲಿ ಉಪ ಚುನಾವಣೆ ಬಂದಿದೆ ಎಂದು ಶ್ರೀರಾಮುಲು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕುನ್ನುವ ದುರಾಸೆ ಬಿಜೆಪಿಗರಿದ್ದು, ಇದೇ ಆಸೆಯಲ್ಲಿ ಶ್ರೀರಾಮುಲು ಹಿಂದೆಮುಂದೆ ಯೋಚಿಸಿದರೆ ರಾಜಿನಾಮೆ ನೀಡಿದ್ದರು. ಬಳ್ಳಾರಿ ಜನರೇನು ರಾಜೀನಾಮೆ ನೀಡಲು ಹೇಳಿರಲಿಲ್ಲ. ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ರಾಜೀನಾಮೆ ನೀಡುತ್ತೇನೆ ಎಂದು ಬಳ್ಳಾರಿ ಜನರನ್ನು ಕೇಳಿಲ್ಲ. ಶ್ರೀರಾಮುಲು ಬಳ್ಳಾರಿ ಮತದಾರರಿಗೆ , ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ ಶ್ರೀರಾಮುಲು ಮತ್ತು ಬಿಜೆಪಿ ಅಭ್ಯರ್ಥಿ ಶಾಂತಾರಿಗೆ ತಕ್ಕ ಪಾಠ ಕಲಿಸಲು ತಕ್ಕ ಸಮಯ ಬಂದೊದಗಿದೆ. ಸೂರ್ಯ ಉದಯವಾಗುವಷ್ಟೇ ಸತ್ಯ ನಮ್ಮ ಅಭ್ಯರ್ಥಿ ಉಗ್ರಪ್ಪ ಜಯಗಳಿಸುತ್ತಾರೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.
ಒಂದು ಬಾರಿ ನೀವು ನಾಯಕ ಸಮುದಾಯವನ್ನು ದಾರಿ ತಪ್ಪಿಸಿದ ಮಾತ್ರಕ್ಕೆ ಪದೇ ಪದೇ ಜನರನ್ನು ದಾರಿ ತಪ್ಪಿಸಲು ಆಗುವುದಿಲ್ಲ ಎಂದ ಅವರು ಎಸ್ಟಿ ಜನಾಂಗದಲ್ಲಿ ಹುಟ್ಟಿ ಲೋಕಸಭೆಯಲ್ಲಿ ಎಸ್ಸಿ/ಎಸ್ಟಿ ಬಗ್ಗೆ ಅವರ ವಿಶೇಷ ಅನುದಾನದ ಬಗ್ಗೆ ಮಾತನಾಡದೇ ಸುಮ್ಮನಿದ್ದವರು ನೀವು. ನಿಮಗೆ ನಾಚಿಕೆ ಆಗಲ್ವಾ? ಇದೆಲ್ಲ ಆದಾ ಬಳಿಕವೂ ಶ್ರೀರಾಮುಲು ಅವರೇ ಯಾಕೆ ಮತ್ತೆ ಮತ್ತೆ ಜಾತಿ ಪ್ರೊಟೆಕ್ಷನ್ ತಗೋತಿರಾ? ವಿಧಾನಸೌಧದ ಮುಂದೆ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕಾಂಗ್ರೆಸ್ ಎನ್ನುವುದು ನೆನಪಿರಲಿ. ನಾಯಕ ಸಮುದಾಯಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ ಎನ್ನುವುದು ತಿಳಿದಿರಲಿ ಎಂದು ಮಾತೀನೇಟು ನೀಡಿದರು.