ಹಾಸನ, ಅ 24 (MSP): ಈ ಬಾರಿಯ ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ, ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಮಣಿಸಲು ಭರ್ಜರಿ ಪ್ಲಾನ್ ಹಾಕಿಕೊಂಡಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಥವಾ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಜೆಡಿಎಸ್ ನ ಭದ್ರಕೋಟೆಯಾಗಿರುವ ಹಾಸನದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ಬದಲಾಗಿ ಪ್ರಜ್ವಲ್ ಕಣಕ್ಕೆ ಇಳಿದರೆ, ಮೂಲತಃ ಹಾಸನದವರೇ ಆಗಿರುವ ಶ್ರೀನಾಥ್ ಅಥವಾ ಗೋಪಿನಾಥ್ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ ಎಂದು ವರದಿಯಾಗಿದೆ.
ಇದರೊಂದಿಗೆ ದೋಸ್ತಿ ಸರ್ಕಾರದಲ್ಲಿ ಅಸಮಾಧಾನ ಹೊಂದಿರುವ ನಾಯಕರನ್ನು , ತನ್ನಡೆಗೆ ಸೆಳೆದು ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಬಿಜೆಪಿ ಚಾಣಕ್ಯ ತಂತ್ರ ಹೆಣೆಯುತ್ತಿದೆ ಎನ್ನಲಾಗಿದ್ದು ಕಾಂಗ್ರೆಸ್ಸಿನ ಮಾಜಿ ಸಚಿವರಾದ ಎ.ಮಂಜು ಅಥವಾ ಬಿ.ಶಿವರಾಂ ಇವರನ್ನು ಬಿಜೆಪಿ ತನ್ನಡೆ ಸೆಳೆಯಲು ಪ್ಲಾನ್ ರೂಪಿಸುತ್ತಿದೆ ಎನ್ನಲಾಗಿದೆ.
ಇದಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತೊಂದು ಮಾಸ್ಟರ್ ಪ್ಲಾನ್ ರೂಪಿಸಿದ್ದು, ಒಂದು ವೇಳೆ ಯೋಜನೆಯಂತೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಯಾಗದೇ ಹೋದರೆ, ಸೆಲೆಬ್ರಿಟಿಗಳನ್ನ ಕಣಕ್ಕಿಳಿಸಿ ಕಠಿಣ ಸ್ವರ್ಧೆ ನೀಡಲು ಚರ್ಚೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.