ಮಂಗಳೂರು, ಅ 24 (MSP): ಬೀದಿ ನಾಯಿ, ಬೆಕ್ಕುಗಳಿಗೆ ತಿಂಡಿ ಹಾಕುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಗಳವಾಗಿ, ದ್ವೇಷದಿಂದ ನೆರೆಮನೆಯವಾಸಿಯನ್ನೇ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದ ಬೆಳ್ತಂಗಡಿ ತಾಲೂಕಿನ ಎಂಬಿಎ ವಿದ್ಯಾರ್ಥಿಯೊಬ್ಬನಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಯಾಗಿದ್ದು, ಬೆಳ್ತಂಗಡಿ ತಾಲ್ಲೂಕಿನ ಸಂತೆಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪಿ.ಚಂದ್ರಶೇಖರ (23) ಎಂಬಾತ ಅಪರಾಧಿಯಾಗಿದ್ದಾನೆ. ಈತ ತನ್ನ ಮನೆಪಕ್ಕದಲ್ಲೆ ವಾಸಿಸುತ್ತಿದ್ದ ಬಿಎಸ್ಎನ್ಎಲ್ ಲೈನ್ಮನ್ ತಿಮ್ಮಪ್ಪ ಪೂಜಾರಿ ಎಂಬುವವರನ್ನು 2017ರ ಜೂನ್ 7ರಂದು ತಲವಾರಿನಿಂದ ಕಡಿದು ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅ.೨೩ ಮಂಗಳವಾರ ತೀರ್ಮಾನ ಪ್ರಕಟಿಸಿದರು.
ಅಪರಾಧಿ ಚಂದ್ರಶೇಖರ ಮತ್ತು ತಿಮ್ಮಪ್ಪ ಪೂಜಾರಿ ಇಬ್ಬರೂ ಬೆಳ್ತಂಗಡಿ ಸಂತೆಕಟ್ಟೆ ಬಳಿ ಒಂದೇ ಕಟ್ಟಡದಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರು. ಚಂದ್ರಶೇಖರ್ ಅವರಿರು ತನ್ನ ಮನೆಯ ಸಮೀಪದಲ್ಲಿರುವ ಬೀದಿ ನಾಯಿ ಮತ್ತು ಬೆಕ್ಕುಗಳಿಗೆ ಆಹಾರ ನೀಡುವ ಹವ್ಯಾಸವಿತ್ತು. ಬೀದಿ ಪ್ರಾಣಿಗಳು ತಿಮ್ಮಪ್ಪ ಪೂಜಾರಿ ಮನೆಯ ಆವರಣದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದವು ಎಂದು ಈ ಬಗ್ಗೆ ಅವರು ಆಕ್ಷೇಪಿಸಿದ್ದರು. ಇದಕ್ಕಾಗಿ ಇಬ್ಬರ ನಡುವೆ ಅನೇಕ ಬಾರಿ ಜಗಳವಾಗಿತ್ತು. ಈ ವಿಚಾರವಾಗಿ ಚಂದ್ರಶೇಖರ ದ್ವೇಷ ಬೆಳೆಸಿಕೊಂಡಿದ್ದ.
2017ರ ಜೂನ್ 7ರಂದು ರಾತ್ರಿ 7.15ರ ಸುಮಾರಿಗೆ ಮೃತ ತಿಮ್ಮಪ್ಪ ಅವರ ಇಬ್ಬರು ಮಕ್ಕಳು ಐಸ್ ಕ್ರೀಂ ತಂದುಕೊಡುವಂತೆ ಕೇಳಿದ್ದರು. ಆಗ ತಿಮ್ಮಪ್ಪ ಪೂಜಾರಿ ಮನೆಯಿಂದ ಹೊರಟು ಸಂತೆಕಟ್ಟೆ– ಅಲ್ಲಾಟಬೈಲು ಮಣ್ಣಿನ ರಸ್ತೆಯಲ್ಲಿ ಬರುತ್ತಿದ್ದಾಗ ಚಂದ್ರಶೇಖರ ಅವರನ್ನು ಅಡ್ಡಗಟ್ಟಿದ್ದ. ತಲವಾರಿನಿಂದ 21 ಬಾರಿ ಅವರ ಮೇಲೆ ಹಲ್ಲೆ ನಡೆಸಿದ್ದ. ತಿಮ್ಮಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದರು. ತಡೆಯಲು ಹೋದ ಮೃತರ ಪತ್ನಿ, ಮಕ್ಕಳು ಮತ್ತು ನೆರೆಹೊರೆಯ ಜನರಿಗೂ ತಲವಾರು ತೋರಿಸಿ ಬೆದರಿಕೆ ಹಾಕಿದ್ದ.
ಕೊಲೆ ಮಾಡಿರುವುದಕ್ಕಾಗಿ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ರೂ. ದಂಡ , ದಂಡ ತಪ್ಪಿದರೆ , ೬ ತಿಂಗಳ ಸಾದಾ ಸಜೆ ವಿಧಿಸಲಾಗಿದೆ. ಮೃತನ ಕುಟುಂಬದವರಿಗೆ ಸಂತ್ರಸ್ತರ ಪರಿಹಾರ ಕಾಯ್ದೆಯಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನವನ್ನೂ ನೀಡಲಾಗಿದೆ.
ಮೃತನ ಇಬ್ಬರು ಮಕ್ಕಳು, ಪತ್ನಿ ಸೇರಿದಂತೆ 23 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಸಾಕ್ಷಿಗಳ ವಿಚಾರಣೆಯವರೆಗಿನ ಪ್ರಕ್ರಿಯೆಯನ್ನು ಹಿಂದಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಸ್.ಬೀಳಗಿ ನಡೆಸಿದ್ದರು. ಈಗಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಪ್ರಕಟಿಸಿದರು.