ವಿಟ್ಲ, ಅ 23(SM): ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗನಗದು ದೋಚಿದ ಘಟನೆ ವಿಟ್ಲದ ಬೊಬ್ಬೆಕೇರಿ ದೇವಸ್ಯ ಬೈಲು ಎಂಬಲ್ಲಿ ನಡೆದಿದೆ.
ವಿಟ್ಲದ ಪತ್ರಕರ್ತ, ವಿಷ್ಣುಗುಪ್ತ ಪುಣಚ ಯಾನೆ ರಮೇಶ್ ಕೊಡಂದೂರು ಹಾಗೂ ಅವರ ಪತ್ನಿ ಬೆಳಿಗ್ಗೆ ಕೆಲಸಕ್ಕೆಂದು ತೆರಳಿದ್ದಾರೆ. ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಗೆ ನುಗ್ಗಿರುವ ಖದೀಮರು ಸುಮಾರು18 ಪವನ್ ಚಿನ್ನಾಭರಣ ಹಾಗೂ 65 ಸಾವಿರ ರೂಪಾಯಿ ನಗದನ್ನು ಕಳವುಗೈದಿದ್ದಾರೆ. ಮನೆಯ ಹಿಂಬಾಗಿಲು ಮುರಿದು, ಒಳನುಗ್ಗಿದ ಕಳ್ಳರು ಮನೆಯೊಳಗಡೆ ಕಪಾಟಿನಲ್ಲಿದ್ದ ನಗನಗದು ದೋಚಿದ್ದಾರೆ.
ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.