ನವದೆಹಲಿ, ಅ 23(SM): ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿವಾದವಾಗುತ್ತಿದ್ದ ಶಬರಿಮಲೆ ತೀರ್ಪಿನ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದಕ್ಕೆ ಸಚಿವೆ ಸ್ಮೃತಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, ಋತು ಸ್ರಾವದ ಸಮಯದಲ್ಲಿ ಮಹಿಳೆಯರು ಸ್ನೇಹಿತರ ಮನೆಗೆ ಸೇರಿದಂತೆ ಯಾರ ಮನೆಗೂ ತೆರಳುವ ಸಂಪ್ರದಾಯವಿಲ್ಲ. ಹೀಗಿರುವಾಗ ಪವಿತ್ರವಾಗಿರುವ ದೇವರ ಮನೆಗೆ ಹೋಗುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.
'ಪೂಜೆ ಮಾಡುವ, ಪ್ರಾರ್ಥನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಪವಿತ್ರವಾಗಿರುವ ಸ್ಥಳಗಳನ್ನು ಅಪವಿತ್ರಗೊಳಿಸುವ ಹಕ್ಕು ಮಹಿಳೆಯರು ಸೇರಿದಂತೆ ಯಾರಿಗೂ ಇಲ್ಲ. ಸುಪ್ರಿಂ ಕೋರ್ಟ್ ತೀರ್ಪಿನ ವಿರುದ್ಧ ನಾನು ಮಾತನಾಡುವುದಿಲ್ಲ.
ಇದೀಗ ಸಚಿವೆ ಸ್ಮೃತಿ ಇರಾನಿ ಹೇಳಿಕೆಗೆ ಪರ ವಿರೋಧಗಳು ಕೇಳಿ ಬರುತ್ತಿವೆ.