ಉಡುಪಿ, ಅ 23(SM): ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಮರಳುಗಾರಿಕೆ ನಿಷೇಧಗೊಂಡ ಪರಿಣಾಮ ಮರಳು ಸಮಸ್ಯೆ ತೀವ್ರಗೊಂಡಿದೆ. ಮರಳಿನ ಲಭ್ಯತೆಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಪ್ರತಿಭಟನಾಕಾರರೊಂದಿಗೆ ಜಿಲ್ಲಾಧಿಕಾರಿಗಳು ಅಕ್ಟೋಬರ್ 22ರಂದು ಮಾತುಕತೆ ನಡೆಸಿದ್ದಾರೆ.
ಸಭೆಯಲ್ಲಿ 20 ದಿನಗಳಲ್ಲಿ ಆಯಾ ತಾಲೂಕು ಮಟ್ಟದಲ್ಲಿ CRZ ಹಾಗು ನೋನ್ CRZ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ಕೊಡುವುದಾಗಿ ಭರವಸೆ ದೊರೆತಿದೆ ಎನ್ನಲಾಗಿದೆ. ಇದರ ಬಗ್ಗೆ ಖುದ್ದು ಜಿಲ್ಲಾಧಿಕಾರಿಯವರು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದಾರೆ. ಅಕ್ಟೊಬರ್ 25ರಂದು ಜಿಲ್ಲೆಯಾದ್ಯಂತ ನಡೆಯುವ ಪ್ರತಿಭಟನೆಗೆ ನಾವು ಸಹಕಾರ ಕೊಡುವುದಿಲ್ಲ ಎಂದು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ಸುವರ್ಣ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ 171 ಪರವಾನಿಗೆದಾರರು ಇದ್ದರು. ಈಗ 65 ಮರಳು ದಕ್ಕೆಗೆ ಪರವಾನಿಗೆ ನೀಡಲು ಅರ್ಜಿ ಕರೆದಿರುತ್ತಾರೆ. ನಾನ್ ಸಿಆರ್ ಝಡ್ ಹಾಗು ಸಿಆರ್ ಝೆಡ್ ಗೆ ಬೇರೆ ಬೇರೆ ಸಮಯದಲ್ಲಿ ಅನುಮತಿ ಕೊಟ್ಟರೆ ಸಂಘರ್ಷ ಸಾಧ್ಯತೆ ಇದೆ. ಅನೇಕ ಕಾನೂನು ತೊಡಕುಗಳು ಅಲ್ಲದೆ ನಡುವೆ ಸರಕಾರಿ ರಜೆಗಳು ಬರುವುದರಿಂದ 30 ದಿವಸಗಳ ಕಾಲಾವಕಾಶ ಕೊಡುತ್ತೇವೆ.
ಇನ್ನು 30 ದಿನಗಳೊಳಗೆ ಅನುಮತಿ ಸಿಗದಿದ್ದರೆ ನವೆಂಬರ್ 22ರಂದು ಬಂದ್ ಗೆ ಕರೆ ನೀಡುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಮುಷ್ಕರ ಕೂರುತ್ತೇವೆ. ಮರಳು ತೆಗೆಯಲು ಅನುಮತಿ ಕೊಡದಿದ್ದರೆ ಸುಮ್ಮನಿರುವ ಮಾತೆ ಇಲ್ಲ ಎಂದು ಪ್ರವೀಣ್ ಸುವರ್ಣ ಹೇಳಿದರು.