ನವದೆಹಲಿ,ಅ 23 (MSP): ಶಬರಿಮಲೆ ಅಯ್ಯಪ್ಪ ದೇಗುಲದ ಒಳಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶ ಅವಕಾಶದ ಅನುಮತಿ ನೀಡಿದ್ದ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆಯನ್ನು ನ.13ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ.
ಸಂಪ್ರದಾಯದ ಪ್ರಕಾರ ದೇವಾಲಯದ ಬಾಗಿಲನ್ನು ಮಲಯಾಳಂ ಮಾಸದ ಐದು ದಿನಗಳ ಪೂಜೆಗಾಗಿ ಅ.17 ರಿಂದ ತೆರೆದಿದ್ದ, ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಸೋಮವಾರ ಮುಚ್ಚಿದೆ. ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದ ಪದ್ಧತಿಯನ್ನು ಮುರಿಯುತ್ತಿರುವುದು ಸರಿಯಲ್ಲ ಎಂದು ಹೇಳುತ್ತಿರುವ ಅಯ್ಯಪ್ಪ ದೇಗುಲದ ಪೂಜಾರಿಗಳು ಹಾಗೂ ಭಕ್ತರು ಹಲವು ದಿನಗಳಿಂದ 10 ರಿಂದ 50 ವರ್ಷದ ಒಳಗಿನ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದರು. ಪ್ರತಿಭಟನೆಯ ನಡುವೆಯೂ ಹಲವು ಮಹಿಳೆಯರು ಅಯ್ಯಪ್ಪನ ದೇಗುಲ ಪ್ರವೇಶ ಮಾಡಲು ಮುಂದಾಗಿ ವಿಫಲಗೊಂಡಿದ್ದರು.
ದೇಗುಲ ಹಾಗೂ ಅರ್ಜಿದಾರರ ಪರ ವಕೀಲರಾದ ಮ್ಯಾಥ್ಯೂ ಜೆ ನೆಡುಂಪಾರ ಅವರು ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಪರಿಗಣಿಸುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ತೀರ್ಪಿನ ವಿರುದ್ಧ 19 ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ತಿಳಿಸಿದ್ದರು. ಇದರಂತೆ ಈ ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯ ನ.13 ರಂದು ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಮರು ಪರಿಶೀಲನೆ ಅರ್ಜಿ ಮೇಲಿನ ಸುಪ್ರೀಂ ತೀರ್ಪು ಈ ವಿವಾದದ ಮುಂದಿನ ನಡೆಯನ್ನು ನಿರ್ಧರಿಸಲಿದೆ. ಸೆ. 28 ರಂದು ನೀಡಿದ್ದ ಈ ಮೊದಲಿನ ತೀರ್ಪು ರದ್ದುಗೊಳಿಸಿ, ಹಿಂದಿನ ಸಂಪ್ರದಾಯಕ್ಕೆ ಅನುಮತಿ ನೀಡಿದರೆ , ಪ್ರಗತಿಪರ ಸಂಘಟನೆಗಳಿಂದ ಮತ್ತಷ್ಟು ಅರ್ಜಿ ಗಳು ಸಲ್ಲಿಕೆಯಾಗಬಹುದು. ಒಂದು ವೇಳೆ ತನ್ನ ಮೊದಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೆ ಸಂಘರ್ಷ ಮತ್ತೆ ಪುನರಾವರ್ತನೆಗೊಳ್ಳಲಿದೆ.