ಮಂಗಳೂರು, ಅ23(SS): ನಗರದ ಹೊರವಲಯದ ಕುಪ್ಪೆಪದವು ಎಂಬಲ್ಲಿ ಮಸೀದಿಯಿಂದ ಮಕ್ಕಳನ್ನು ಹೊರಹಾಕಿ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಶೇಖ್ ಅಬ್ದುಲ್ಲಾ ಎಂದು ಗುರುತಿಸಿಲಾಗಿದೆ. ಕುಪ್ಪೆಪದವು ಎಂಬಲ್ಲಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವಿಚಾರ ಚರ್ಚೆಗೆ ಕಾರಣವಾಗಿದೆ.
ಕಳೆದ ಎರಡು ತಿಂಗಳಿಂದ ಶೇಖ್ ಅಬ್ದುಲ್ಲಾ ಅವರ ಮಕ್ಕಳು ಸೇರಿದಂತೆ ಕೆಲ ವಿದ್ಯಾರ್ಥಿಗಳನ್ನು ಮಸೀದಿಯಿಂದ ಹೊರ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಶೇಖ್ ಅಬ್ದುಲ್ಲಾ ಮಸೀದಿಗೆ ಈ ಬಗ್ಗೆ ಕೇಳಲೆಂದು ಹೊರಟಾಗ ಕುಪ್ಪೆಪದವು ಮಸೀದಿಯ ಗುರುಗಳು ಮತ್ತು ಸ್ಥಳೀಯ ಕಿಡಿಗೇಡಿಗಳು ಸೇರಿಕೊಂಡು ಶೇಖ್ ಅಬ್ದುಲ್ಲಾ ಮೇಲೆ ಹಲ್ಲೆ ನಡೆಸಿದ್ದಾರೆ.
ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿಯಲ್ಲಿ ಈ ಹಿಂದೆ ಕೆಲವೊಂದು ನಿಯಮಗಳಿತ್ತು. ಹಳೆಯ ನಿಯಮಗಳನ್ನು ಬದಲಾಯಿಸಬಾರದು ಎಂದು ಇದರ ವಿರುದ್ಧ ಪ್ರಕರಣ ದಾಖಲಿಸಿ, ಶೇಖ್ ಅಬ್ದುಲ್ಲಾ ಕೋರ್ಟ್ ಮೆಟ್ಟಲೇರಿದ್ದರು. ಈ ವಿಚಾರವಾಗಿ, ಕಳೆದ ಎರಡು ತಿಂಗಳಿಂದ ಶೇಖ್ ಅಬ್ದುಲ್ಲಾ ಅವರಿಗೆ ಕೋಟಿ ರಝಾಕ್ ಮತ್ತು ತಂಡದಿಂದ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಂದು ಮುಂಜಾನೆಯೂ ಮಸೀದಿಯಿಂದ ಮಕ್ಕಳನ್ನು ಹೊರಹಾಕಿದ ಪ್ರಸಂಗ ನಡೆದಿದ್ದು, ಶೇಖ್ ಅಬ್ದುಲ್ಲಾ ಈ ಬಗ್ಗೆ ಪ್ರಶ್ನಿಸಲು ತೆರಳಿದ್ದರು. ಈ ವೇಳೆ ಕುಪ್ಪೆಪದವು ಮಸೀದಿ ಆವರಣದಲ್ಲಿ ಗುರುಗಳಾದ ಮಹಮ್ಮದ್ ಹನೀಫ್ ಖಾಸಿಮಿ ಮತ್ತು ಕೋಟಿ ರಝಾಕ್ ತಂಡದವರು ಹಲ್ಲೆ ನಡೆಸಿದ್ದು, ಶೇಖ್ ಅಬ್ದುಲ್ಲಾ ಅವರಿಗೆ ಗಾಯಗಳಾಗಿವೆ.
ಇದೀಗ ಶೇಖ್ ಅಬ್ದುಲ್ಲಾ ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.