ಮಂಗಳೂರು, ಅ 23 (MSP): ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ 51ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಅ. 24 ರ ಬುಧವಾರ ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಜ್ಯದ ಜನತೆ ಪರವಾಗಿ ಡಾ. ಹೆಗ್ಗಡೆಯವರನ್ನು ಗೌರವಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಯು.ಟಿ ಖಾದರ್, ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ , ಎಸ್ .ಎಲ್ ಬೋಜೆಗೌಡ. ಇತಿಹಾಸ ತಜ್ಞೆ ಚೂಡಾಮಣಿ ನಂದಗೋಪಾಲ್ ಭಾಗವಹಿಸಲಿದ್ದಾರೆ.
ಪಟ್ಟಾಭಿಷೇಕ ವರ್ಧಂತ್ಯುತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಧರ್ಮಸ್ಥಳ ಸರ್ವಾಲಂಕೃತಗೊಳ್ಳಲಿದೆ. ಬುಧವಾರ ಸಂಜೆ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅ.24 ರಂದು ಮಧ್ಯಾಹ್ನ 1 ಕ್ಕೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ನಲ್ಲಿ ಹೊರಟು ಮಧ್ಯಾಹ್ನ 2.30 ಕ್ಕೆ ಧರ್ಮಸ್ಥಳ ವಸಂತ ಮಹಲ್ ಹೆಲಿಪ್ಯಾಡ್ ನಲ್ಲಿ ಇಳಿಯುವರು. ಧರ್ಮಸ್ಥಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ಹಾಗೂ ಧರ್ಮಸ್ಥಳದಲ್ಲಿ ನಿರ್ಮಿಸಿರುವ ಮಂಜುಷಾ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಲಿದ್ದು, ಸಂಜೆ 4.15 ಕ್ಕೆ ಬೆಂಗಳೂರಿಗೆ ತೆರಳುವರು.