ಮಂಗಳೂರು,ಅ 23 (MSP): ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿರುವ ನಗರದ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿ ಅವ್ಯವಸ್ಥೆಯ ಅಗರವಾಗಿದೆ. ಅದರಲ್ಲೂ ನಗರದ ಹೊರವಲಯದ ರಸ್ತೆಗಳ ಸ್ಥಿತಿಯನ್ನಂತೂ ಹೇಳುವಂತಿಲ್ಲ. ದೇರೆಬೈಲ್ ಕೊಂಚಾಡಿಯ ವಾರ್ಡ್ ನಂಬರ್ 23ರ ಐದನೇ ಕ್ರಾಸ್ ರಾಮ ಭಜನಾ ಮಂದಿರದ ಬಳಿ ಲ್ಯಾಂಡ್ಲಿಂಕ್ಸ್, ಗಿರಿನಗರ ರಸ್ತೆಯ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರದ ಬದಲು, ಕನಿಷ್ಠ ಪಾದಚಾರಿಗಳು ಬಳಸುವ ಸ್ಥಿತಿಯಲ್ಲೂ ಇಲ್ಲ ಈ ರಸ್ತೆಗಳು.
ಸ್ಥಳೀಯರು ತಮ್ಮ ದಿನನಿತ್ಯದ ಓಡಾಟಕ್ಕೆ ಇದೇ ರಸ್ತೆಯನ್ನು ಅವಲಂಬಿಸಿದ್ದು , ಅವ್ಯವಸ್ಥೆಯ ಅಗರವಾಗಿರುವ ಈ ರಸ್ತೆಯಲ್ಲಿ ವೃದ್ಧರು, ಅಸಹಾಯಕರು, ಗರ್ಭಿಣಿಯರು ಬಳಸಲಾಗದೆ ಕಂಗೆಟ್ಟಿದ್ದಾರೆ. ಶಾಲಾ ಮಕ್ಕಳನ್ನಂತೂ ಈ ರಸ್ತೆಯಲ್ಲಿ ಕಳುಹಿಸುವುದೇ ಅಪಾಯಕಾರಿಯಾಗಿದೆ. ರಸ್ತೆ ಮೇಲೆ ಹಾಕಲಾಗಿರುವ ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಎದ್ದು ಹೋಗಿದೆ. ಮಳೆ ಬಂದಾಗ ಹೊಂಡಗುಂಡಿಗಳಲ್ಲಿ ನೀರು ನಿಲ್ಲುತ್ತಿದೆ. ಮಂಗಳೂರು ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಸದಸ್ಯರು ಇನ್ನಾದರೂ ಈ ರಸ್ತೆಯ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿ ಪಡಿಸಲು ಮುಂದಾಗಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.