ನವದೆಹಲಿ, ಅ 23 (MSP): ದೇಶಾದ್ಯಂತ ಪಟಾಕಿ ಮಾರಾಟ ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಮುಗಿದಿದ್ದು, ಸುಪ್ರಿಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಪಟಾಕಿ ಬಳಕೆಯ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಆದರೆ ಪಟಾಕಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
ದೀಪಾವಳಿಗೆ 15 ದಿನಗಳು ಬಾಕಿ ಇರುವಾಗ ಈ ಮಹತ್ವದ ತೀರ್ಪು ಹೊರಬೀಳುತ್ತಿರುವ ಕಾರಣ ಪಟಾಕಿ ತಯಾಕರು ಮತ್ತು ಮಾರಾಟಗಾರರಿಗೆ ಆತಂಕ ಉಂಟು ಮಾಡಿತ್ತು. ಕಡಿಮೆ ಹೊಗೆಕಾರಕ ಪಟಾಕಿಗಳನ್ನು ಮಾತ್ರ ಉತ್ಪಾದಿಸಬೇಕು ಎಂದು ಉತ್ಪಾದಕರಿಗೆ ಷರತ್ತು ಹಾಕಿರುವ ಕೋರ್ಟ್, ಆನ್ಲೈನ್ನಲ್ಲಿ ಪಟಾಕಿಗಳನ್ನ ಮಾರಾಟ ಮಾಡುವ ಹಾಗಿಲ್ಲ ಅಲ್ಲದೆ ಪರ್ಮಿಟ್ ಹೊಂದಿರುವ ಕಂಪನಿಗಳು ಮಾತ್ರ ಪಟಾಕಿ ಉತ್ಪಾದಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಷರತ್ತು ವಿಧಿಸಿದೆ.
ಇದಲ್ಲದೆ ಪಟಾಕಿಗಳನ್ನು ಎಲ್ಲೆಂದರಲ್ಲಿ ಸುಡುವ ಹಾಗಿಲ್ಲ ಎಂದು ಖಡಕ್ ಸೂಚನೆ ನೀಡಿರುವ ಕೋರ್ಟ್ ನಿಗದಿತ ಸ್ಥಳದಲ್ಲಿ ಮಾತ್ರ ಪಟಾಕಿ ಸಿಡಿಸಬೇಕು ಎಂದಿದೆ,ಇನ್ನು ಹಿಂದುಗಳ ಅತಿ ದೊಡ್ಡ ಹಬ್ಬವಾಗಿರುವ ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಇದಲ್ಲದೆ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ರಾತ್ರಿ 11.45ರಿಂದ 12.45ರವರೆಗೆ ಪಟಾಕಿ ಸಿಡಿಸಲು ಒಪ್ಪಿಗೆ ನೀಡಿದೆ. ದೇಶದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು, ದೇಶದಲ್ಲಿ ಪಟಾಕಿ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಬೇಕು ಎಂದು ಅನೇಕರು ಕಳೆದ ವರ್ಷ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್, ಪಟಾಕಿ ಉತ್ಪಾದಕರ ಜೀವನ ನಿರ್ವಹಣೆ ಹಕ್ಕು ಹಾಗೂ ದೇಶದ 130 ಕೋಟಿ ಜನರ ಆರೋಗ್ಯದ ಹಕ್ಕು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಬೇಕು ಎಂದು ಹೇಳಿತ್ತು.
ಜೀವನದ ಹಕ್ಕು ಎನ್ನುವುದು ಪಟಾಕಿ ಉತ್ಪಾದಕರ ಮತ್ತು ಇತರ ಜನರ ಹಕ್ಕು ಹೀಗೆ ಎರಡೂ ವಿಭಾಗದ ಜನರಿಗೆ ಅನ್ವಯಿಸುತ್ತದೆ. ಅದ್ದರಿಂದ ಪಟಾಕಿ ನಿಷೇಧ ಮಾಡುವ ಬಗ್ಗೆ ಎಂದು ಯೋಚಿಸುವಾಗ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತ್ತು. ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ಪೀಠ ಇಂದು ಈ ತೀರ್ಪು ಪ್ರಕಟಿಸಿದೆ.