ಮಂಗಳೂರು, ಅ.23 (MSP): ಬಡತನದ ನಡುವೆಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ನೀಟ್ ಪರೀಕ್ಷೆ ಬರೆದು ಅರ್ಹತೆ ಹೊಂದಿದರೂ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸೀಟು ಒದಗಿಸಿಕೊಡುವ ಭರವಸೆ ಪತ್ರ ಕೈಸೇರಿದೆ.
ಮಂಜನಾಡಿ ಗ್ರಾಮದ ಕಲ್ಕಟ್ಟ ನಿವಾಸಿ ಸಾಧುಕುಂಞಿ ಎಂಬವರ ಪುತ್ರ ಅಬ್ದುಲ್ ನಾಸಿರ್ ಎಂಬವರ ಕೈಗೆ ಪತ್ರ ಸೇರಿದೆ. ಕಲ್ಕಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಪೂರೈಸಿದ ಅಬ್ದುಲ್ ನಾಸಿರ್, ಕಲಿಕೆಯಲ್ಲಿ ಮುಂದಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾದ ಅವರು ವೈದ್ಯನಾಗಬೇಕೆಂಬ ಕನಸ್ಸು ಹೊಂದಿದ್ದರು. ಸಾಧುಕುಂಞಿ ದಂಪತಿಗೆ ಇರುವ ಏಳು ಮಕ್ಕಳಲ್ಲಿ ನಾಸಿರ್ ಕಿರಿಯ ಮಗ. ಮನೆಯಲ್ಲಿ ಹೆಚ್ಚಿನ ಶಿಕ್ಷಣ ಹೊಂದಿದವರು ಯಾರೂ ಇಲ್ಲ. ನಾಸೀರ್ ಓರ್ವನೇ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದವರು. ತಂದೆಯ ಕ್ಯಾಂಟೀನ್ ವ್ಯಾಪಾರ ಹಾಗೂ ನಾಸೀರ್ ಸಹೋದರರು ಕೆಲಸ ನಿರ್ವಹಣೆಯಿಂದ ಕುಟುಂಬದ ನಿರ್ವಹಣೆಯಾಗುತ್ತಿದ್ದರೂ, ವೈದ್ಯಕೀಯ ಸೀಟಿಗೆ ಹಣ ಹೊಂದಿಸುವಷ್ಟು ಶಕ್ತರಲ್ಲ. ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಪಿಯು ಕಾಲೇಜಿನಲ್ಲಿ 2017 ರಲ್ಲಿ ದ್ವಿತೀಯ ಪಿಯುಸಿ ಪೂರೈಸಿದ ಅಬ್ದುಲ್ ನಾಸೀರ್, ವೈದ್ಯಕೀಯ ಶಿಕ್ಷಣವನ್ನೇ ಪಡೆಯಬೇಕು ಅನ್ನುವ ಉದ್ದೇಶದಿಂದ ಒಂದು ವರ್ಷ ಕಾದು, 2018ರ ಮೇ.6 ರಂದು ನೀಟ್ ಪರೀಕ್ಷೆ ಬರೆದರು. ಫಲಿತಾಂಶ ಪ್ರಕಟದಲ್ಲಿ 139 ರ್ಯಾಂಕ್ ಪಡೆದುಕೊಂಡಿದ್ದಾರೆ. ಆದರೆ ವೈದ್ಯಕೀಯ ಸೀಟಿಗಾಗಿ ಕಾದು ಕುಳಿತರೂ ಯಾವುದೇ ಕಾಲೇಜಿನಲ್ಲಿ ಸೀಟು ದೊರೆಯಲಿಲ್ಲ. ಇದರಿಂದ ನೊಂದ ವಿದ್ಯಾರ್ಥಿ ಅಬ್ದುಲ್ ನಾಸೀರ್ ರಾಜ್ಯದ ಮುಖ್ಯಮಂತ್ರಿ ಗಳಿಗೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿ ಪತ್ರ ರವಾನಿಸಿದ್ದರು. ಅ.12 ರಂದು ಬರೆದಿರುವ ಪತ್ರಕ್ಕೆ ಬೆಂಗಳೂರು, ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಸಚಿವಾಲಯದಿಂದ ಅ.17 ರಂದು ಸ್ಪಂದನೆಯ ಪತ್ರ ವಿದ್ಯಾರ್ಥಿ ಕೈ ಸೇರಿದೆ. ವೈದ್ಯಕೀಯ ಸೀಟಿನ ಮನವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಬೆಂಗಳೂರು ಇವರಿಗೆ ಪತ್ರದ ಮೂಲಕ ಸೂಚಿಸಲಾಗಿದೆ . ಇದರಿಂದಾದರೂ ತನ್ನ ಕನಸು ನನಸಾಗಬಹುದೆಂಬ ಹಂಬಲದಲ್ಲಿ ವಿದ್ಯಾರ್ಥಿ ಹಾಗೂ ಕುಟುಂಬ ಮೂಲ ಇದ್ದಾರೆ.
'ಮನೆಯಲ್ಲಿ ದೊಡ್ಡ ಕಲಿತವರು ಯಾರೂ ಇಲ್ಲ. ಕಿರಿ ವಯಸ್ಸಿನಿಂದ ಕಲಿಕೆ ಅಂದರೆ ಆಸಕ್ತಿ. ಜೊತೆಗೆ ವೈದ್ಯನಾಗಬೇಕೆಂಬ ಮಹದಾಸೆ ಇತ್ತು. ಅದಕ್ಕಾಗಿ ಪಿಯುಸಿ ಮುಗಿಸಿ ಒಂದು ವರ್ಷ ಕಾದು ನೀಟ್ ಪರೀಕ್ಷೆ ಬರೆದಿದ್ದೇನೆ. ಆದರೆ ಯಾವುದೇ ಕಾಲೇಜುಗಳಲ್ಲಿ ಸೀಟು ಸಿಗಲಿಲ್ಲ. ಕಡು ಬಡ ಕುಟುಂಬದಲ್ಲಿ ಜನಿಸಿರುವುದರಿಂದ ಮ್ಯಾನೇಜ್ ಮೆಂಟ್ ಸೀಟು ತೆಗೆಯಲು ಅಸಾಧ್ಯನಾಗಿದ್ದೇನೆ. ಅದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳ ಸ್ಪಂಧಿಸಿ ಸೀಟು ಒದಗಿಸುವರೇ ಅನ್ನುವ ಉದ್ದೇಶದಿಂದ ಪತ್ರವನ್ನು ಬರೆದಿದ್ದೇನೆ. ಕೂಡಲೇ ಸ್ಪಂಧನೆ ಪತ್ರವೂ ಸಿಕ್ಕಿದೆ. ಇದರಿಂದ ಸಂತಸವಾಗಿದೆ. ಮುಂದೆ ಸೀಟು ಸಿಗಬಹುದೆಂಬ ಭರವಸೆಯೂ ಇದೆ ಎನ್ನುತ್ತಾರೆ ಪತ್ರ ಬರೆದ ಅಬ್ದುಲ್ ನಾಸೀರ್.