ಮಂಗಳೂರು, ಅ 8 : ಓಲಾ ಉಬರ್ ಕಾರುಗಳ ಕಾನೂನು ಬಾಹಿರ ಓಡಾಟವನ್ನು ವಿರೋಧಿಸಿ ಇಂದು ಮಂಗಳೂರು ನಗರ ಆಟೋ ಚಾಲಕ ಮಾಲಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಚಾಲಕರು ರಿಕ್ಷಾ ಓಡಾಟವನ್ನು ಸ್ಥಗಿತಗೊಳಿಸಿ ಪಾಲ್ಗೊಂಡಿದ್ದರು. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗಿರುವ ನಿಯಮಗಳನ್ನು ಗಾಳಿಗೆ ತೂರಿ ಈ ಕಾರುಗಳು ಓಡಾಟ ನಡೆಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಈ ಬಗ್ಗೆ ಮೌನವಹಿಸುತ್ತಿದ್ದಾರೆ. ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತೇವೆಂದು ಆಮಿಷವೊಡ್ಡಿ ಬಳಿಕ ಹೆಚ್ಚು ಹಣವನ್ನು ಪಡೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.