ಕೋಲ್ಕತಾ,ಅ 22 (MSP): ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿದ ಕಾಮುಕರು, ನಂತರ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತೂರಿಸಿ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ. ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆಯ ಶಿಕ್ಷೆಯ ಬಳಿಕವೂ ಮತ್ತೆ ನಿರ್ಭಯಾ ರೀತಿಯ ಪ್ರಕರಣ ನಡೆಯುತ್ತಿರುವುದು ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಧೂಪ್ಗುರಿ ಪೊಲೀಸ್ ಠಾಣಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನಿರಂಜನ್ ಪತ್ ಪ್ರದೇಶದಲ್ಲಿ ಮಹಿಳೆಯ ಮನೆಯ ಸಮೀಪ ಶನಿವಾರ ಆಕೆಯ ಸಂಬಂಧಿಕರೇ ಭೂ ವಿವಾದದ ವೈಮನಸ್ಸಿನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ಮನೆಯವರೊಂದಿಗೆ ಹಾಗೂ ಅತ್ಯಾಚಾರಿಗಳ ನಡುವೆ ಜಾಗದ ವಿಚಾರವಾಗಿ ವೈಮನಸ್ಸಿತ್ತು. ಹೀಗಾಗಿ ದ್ವೇಷ ಸಾಧನೆ ಹೊಂಚು ಹಾಕುತ್ತಿದ್ದ ಕಾಮುಕರು, ಮಹಿಳೆಯ ಪತಿ ಮನೆಯಲ್ಲಿಲ್ಲದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಶನಿವಾರ ಭೂ ವ್ಯಾಜ್ಯವನ್ನು ಬಗೆಹರಿಸುವುದಾಗಿ ಹೇಳಿ, ಆಕೆಯ ಮನೆ ಬಳಿ ಬಂದ ದುಷ್ಟರು ಆಕೆಯ ಮನವೊಲಿಸಿ ಮನೆಯಿಂದ ಹೊರಬರುವಂತೆ ಮಾಡಿದ್ದಾರೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳು ಹಾಕಿ ವಿಕೃತ ಮೆರೆದಿದ್ದಾರೆ.
ಅಸ್ವಸ್ಥಳಾಗಿ ಬಿದ್ದಿದ್ದ ಮಹಿಳೆಯನ್ನು ರಿಕ್ಷಾ ಎಳೆಯುವವನೋರ್ವ ನೋಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಂಬಂಧಿಕ ಹಾಗೂ ಅವರು ಸಹವರ್ತಿಗಳನ್ನು ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.