ಜಲಂಧರ್, ಅ 22 (MSP): ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಿಷಪ್ ಫ್ರಾಂಕೋ ಮುಳಕಲ್ ಅವರ ವಿರುದ್ದ ಹೇಳಿಕೆ ನೀಡಿದ್ದ ೬೨ ವರ್ಷದ ಪಾದ್ರಿ ಕುರಿಯಕೋಸ್ ಕಟ್ಟುಥಾರ ಅವರು ಶವವಾಗಿ ಅ.22ರ ಸೋಮವಾರ ಪತ್ತೆಯಾಗಿದ್ದಾರೆ
ಪಾದ್ರಿ ಕುರಿಯಕೋಸ್ ಕಟ್ಟುಥಾರ ಅವರ ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆದರೆ, ಪಾದ್ರಿ ಅವರ ಕುಟುಂಬಸ್ಥರು ಅವರ ಸಾವಿನ ಹಿಂದೆ ಷಡ್ಯಂತ್ರವಿರುವುದಾಗಿ ಆರೋಪಿಸಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ದಿನಗಳ ಹಿಂದಷ್ಟೇ ಫಾದರ್ ಕುರಿಯಕೋಸ್ ಅವರು ಬಿಷಪ್ ಫ್ರಾಂಕೋ ವಿರುದ್ಧ ಕೇರಳ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದರು.
ಕಟ್ಟುಥಾರ ಅವರ ಸಹೋದರ ಜೋಸ್ ಅವರು, ಸಹೋದರನ ಸಾವಿನಲ್ಲಿ ಪಿತೂರಿನಡೆದಿದ್ದು ಬಿಷಪ್ ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕೆಲ ದಿನಗಳಿಂದ ಚರ್ಚ್ ಅಧಿಕಾರಿಗಳಿಂದ ತಮಗೆ ಕೊಲೆ ಬೆದರಿಕೆ ಕರೆ ಬರುತ್ತಿರುವುದಾಗಿಯೂ ಕುರಿಯಕೋಸ್ ಅವರು ತನ್ನ ಬಳಿ ಹೇಳಿಕೊಂಡಿದ್ದರು ಎಂದು ಸಹೋದರ ತಿಳಿಸಿದ್ದಾರೆ.
ಪಾದ್ರಿ ಕುರಿಯಕೋಸ್ ಕಟ್ಟುಥಾರ ಅವರ ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ದಾಸುಯಾದ ಡಿಎಸ್ ಪಿ ಎ.ಆರ್ ಶರ್ಮಾ ತಿಳಿದ್ದಾರೆ.