ಬೆಂಗಳೂರು,ಅ 22 (MSP): ಭಾರತದಲ್ಲಿ ವಾಯುಮಾಲಿನ್ಯದಲ್ಲಿ ನಂಬರ್ ವನ್ ಸ್ಥಾನದಲ್ಲಿರುವ ದೆಹಲಿಯ ಬಳಿಕ ಎರಡನೇ ಸ್ಥಾನದಲ್ಲಿ ಬೆಂಗಳೂರು ಇರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತೊಮ್ಮೆ ಹಲವು ಕಟ್ಟುನಿಟ್ಟು ಕ್ರಮಗಳ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಹೀಗಾಗಿ ಹದಿನೈದು ವರ್ಷಕ್ಕಿಂತ ಹಳೆಯ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರಕ್ಕೆ ಇನ್ಮುಂದೆ ರಾಜ್ಯ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದೆ.
ಬೆಂಗಳೂರು ನಗರವೊಂದರಲ್ಲೇ ಸುಮಾರು 16 ಲಕ್ಷ ಹಳೆಯ ವಾಹನಗಳಿರುವುದನ್ನು ಅಂದಾಜು ಮಾಡಲಾಗಿದ್ದು, ಇದರಿಂದ ಹೊರಬೀಳುವ ವಿಷಯುಕ್ತ ಅನಿಲದಿಂದ ನಗರದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಹದಿನೈದು ವರ್ಷಕ್ಕಿಂತ ಹಿಂದಿನ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರ ನಿಷೇಧಿಸುವಂತೆ ಕೆಎಸ್ಪಿಸಿಬಿ 2016 ರಲ್ಲೇ ಸರ್ಕಾರಕ್ಕೆ ನೋಟೀಸ್ ನೀಡಿತ್ತು. ಆದರೆ ಬೃಹತ್ ಸಂಖ್ಯೆಯ ವಾಹನಗಳನ್ನು ನಿಷೇಧಿಸಿವ ನಿಯಮ ಜಾರಿಗೆ ತಂದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಬಹುದು ಎನ್ನುವ ಕಾರಣಕ್ಕೆ ಸರ್ಕಾರ ಹಿಂತೇಟು ಹಾಕಿತ್ತು. ಹೀಗಾಗಿ ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ, ಕೇಂದ್ರ ಸರ್ಕಾರದ ಕೆಲ ಮಸೂದೆಯಲ್ಲೇ ತಿದ್ದುಪಡಿ ತಂದು, ಎಷ್ಟು ವರ್ಷ ಹಳೆಯದಾದ ವಾಹನಗಳನ್ನು ನಿಷೇದ ಮಾಡಬೇಕು ಮತ್ತು ಯಾವ ರೀತಿಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಬೇಕು ಎಂಬ ವಿವರವಾದ ವರದಿ ಸಿದ್ಧಪಡಿಸಲಾಗುತ್ತಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲೇ ಟಾಸ್ಕ್ ಫೋರ್ಸ್ ತಂಡ ರಚಸಿ, ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆಕ್ಷನ್ ಪ್ಲಾನ್ ತಯಾರಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ಅತಿ ಹೆಚ್ಚು ವಿಷಕಾರಿ ಅನಿಲ ಹೊರಬರುತ್ತಿರುವ ವಾಹನಗಳನ್ನು ಪಟ್ಟಿ ಮಾಡಿದೆ. ಅಲ್ಲದೆ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಲಾಗಿದ್ದು, ಸರ್ಕಾರ ಹಂತಹಂತವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.