ತಿರುವನಂತಪುರ,ಅ 22 (MSP): ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ದ ಲೈಂಗಿಕ ಕಿರುಕುಳ ನೀಡಿದ ಮತ್ತು ಅತ್ಯಾಚಾರ ಆರೋಪದ ಹಿನ್ನಲೆಯಲ್ಲಿ ಕೇಸು ದಾಖಲಾಗಿದೆ. ವಿವಾದಾತ್ಮಕ ಸೋಲಾರ್ ಹಗರಣದ ಆರೋಪಿ ಸರಿತಾ ಎಸ್. ನಾಯರ್ ಅರೋಪದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮೀ ಟೂ ಅಭಿಯಾನ ಮಾಡಿದ ಸದ್ದಿನ ನಡುವೆಯೇ ಇಂಥದ್ದೊಂದು ಪ್ರಕರಣ ಕೇರಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕೇರಳ ಕ್ರೈಂ ಬ್ರ್ಯಾಂಚ್ ಪೊಲೀಸರು ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು, ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಸರಿತಾ ನಾಯರ್ ಮೇಲೆ ಚಾಂಡಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಎಂ ಅಧಿಕೃತ ನಿವಾಸ "ಕ್ಲಿಫ್ ಹೌಸ್" ನಲ್ಲಿ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿದ ಪೊಲೀಸರು ಶನಿವಾರ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಎಫ್ಐಆರ್ ಪ್ರತಿ ಸಲ್ಲಿಸಿದ್ದಾರೆ. 2013ರಲ್ಲಿ ಸೋಲಾರ್ ಫಲಕ ಅಳವಡಿಕೆ ಸಂಬಂಧ ಖಾಸಗಿ ಸಂಸ್ಥೆಯೊಡನೆ ಹೂಡಿಕೆಗಾಗಿ ಮಾತುಕತೆಗೆ ತೆರಳಿದ್ದಾಗ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ತನ್ನನ್ನು ಅವರಿದ್ದ ಕೋಣೆಗೆ ಆಹ್ವಾನಿಸಿದ್ದು ಬಳಿಕ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದರು ಎಂದು ಸರಿತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತ್ರಿಕ್ರಿಯೆ ನೀಡಿರುವ ಮಾಜಿ ಸಿಎಂ ಚಾಂಡಿ, ಕಾನೂನಿನ ಪ್ರಕಾರ ಪ್ರಕರಣವನ್ನು ಎದುರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಈ ಆರೋಪ ರಾಜಕೀಯ ಪ್ರೇರಿತ ಎನ್ನುವುದು ಸ್ಪಷ್ಟವಾಗಿದ್ದು, ಅದೇ ಬಲದಿಂದ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.