ನವದೆಹಲಿ,ಅ 22 (MSP): ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಹೆಸರನ್ನು ಶ್ಯಾಮಲಾ ಎಂದು ಮರುನಾಮಕರಣ ಮಾಡಲು ಅಲ್ಲಿನ ಸರಕಾರ ಚಿಂತನೆ ನಡೆಸಿದೆ.
ಶಿಮ್ಲಾವನ್ನು ಶ್ಯಾಮಲಾ ಎಂದು ಬದಲಾಯಿಸಬೇಕು ಎಂದು ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಹಲವು ಹಿಂದೂಪರ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ. ಹಿಂದೂ ಸಂಘಟನೆಗಳು ಇತ್ತೀಚೆಗೆ ಆರಂಭಿಸಿರುವ ಅಭಿಯಾನಕ್ಕೆ ಪೂರಕವಾಗಿ ಅಲ್ಲಿನ ಬಿಜೆಪಿ ಅಡಳಿತದ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರಾಜಧಾನಿಯ ಹೆಸರು ಬದಲಾಯಿಸುವ ಪ್ರಸ್ತಾವನೆ ಬಂದರೆ ಸರಕಾರ ಪರಿಶೀಲಿಸಬಹುದು ಎಂದು ಅಲ್ಲಿನ ಆರೋಗ್ಯ ಸಚಿವ ವಿಪಿನ್ ಸಿಂಗ್ ಪರ್ಮಾರ್ ಹೇಳಿದ್ದಾರೆ.
ಶಿಮ್ಲಾದ ಮೂಲ ಹೆಸರು ಶ್ಯಾಮಲಾ ಎಂದೇ ಇದ್ದು, ಬ್ರಿಟಿಷರು ಉಚ್ಚಾರಣೆಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬದಲಿಸಿದ್ದರು ಎಂಬುದು ವಿಶ್ವಹಿಂದೂ ಪರಿಷತ್ ವಾದ. ಹೆಸರು ಬದಲಾವಣೆ ಪರ ಮತ್ತು ವಿರುದ್ಧವಾಗಿ ಭಾರಿ ಚರ್ಚೆ ಆರಂಭವಾಗಿದೆ.
ಜಗತ್ತಿನ ಖ್ಯಾತ ಪ್ರವಾಸಿ ಸ್ಥಳಗಳಲ್ಲಿ ಶಿಮ್ಲಾ ಸಹ ಸ್ಥಾನ ಪಡೆದಿದೆ. ಹೆಸರು ಬದಲಿಸುವುದರಿಂದ ಅದರ ಖ್ಯಾತಿಗೆ ಧಕ್ಕೆಯಾಗಲಿದೆ’ ಎಂದು ಹಲವರು ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.ಸಣ್ಣ ಹಳ್ಳಿಯಾಗಿದ್ದ ಶಿಮ್ಲಾದಲ್ಲಿ ಬ್ರಿಟಿಷ್ ಅಧಿಕಾರಿ ಚಾರ್ಲ್ಸ್ ಕೆನಡಿ 1824ರಲ್ಲಿ ಮನೆಯೊಂದನ್ನು ನಿರ್ಮಿಸಿದ್ದ. ಅದು ಬಳಿಕ ಕೆನಡಿ ಹೌಸ್ ಎಂದೇ ಖ್ಯಾತಿಗೆ ಬಂತು. ಶಿಮ್ಲಾವನ್ನು ಪಟ್ಟಣವಾಗಿ ಅಭಿವೃದ್ಧಿಪಡಿಸಿದವರಲ್ಲಿ ಕೆನಡಿಯ ಕೊಡುಗೆ ಮಹತ್ವದ್ದು. 1864ರಲ್ಲಿ ಬ್ರಿಟಿಷರು ಇದನ್ನು ತಮ್ಮ ಬೇಸಿಗೆ ರಾಜಧಾನಿಯನ್ನಾಗಿ ಘೋಷಿಸಿಕೊಂಡಿದ್ದರು. 1947ರವರೆಗೂ ಶಿಮ್ಲಾಗೆ ಆ ಸ್ಥಾನ ಇತ್ತು.