ಕೇರಳ, ಅ 22 (MSP): ತಿಂಗಳ ಪೂಜೆಗಾಗಿ ಅ.17 ರ ಬುಧವಾರ ತೆರೆಯಲಾಗಿದ್ದ ಶಬರಿಮಲೆ ದೇಗುಲದ ಬಾಗಿಲು ಅ.22 ಸೋಮವಾರ ಮುಚ್ಚಲಿದೆ. ಹೀಗಾಗಿ ಇಂದು ಪ್ರತಿಭಟನಕಾರರಿಗೆ ಮತ್ತು ಪ್ರವೇಶಿಸಲು ಇಚ್ಚಿಸುವ ಮಹಿಳೆಯರಿಗೆ ನಿರ್ಣಾಯಕ ದಿನವಾಗಿದೆ. ಶಬರಿಮಲೆ ಸುತ್ತಮುತ್ತ ಬಿಗುವಿನ ವಾತಾವರಣದಿಂದ ಕೂಡಿದ್ದು, ಪ್ರತಿಭಟನಕಾರರನ್ನು ನಿಯಂತ್ರಿಸಲು ಕೇರಳ ಸರ್ಕಾರ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿ ಸುಪ್ರಿಂ ಕೋರ್ಟ್ ತೀರ್ಪು ನೀಡಿದ ನಂತರ ವಿಶೇಷ ಪೂಜೆಗಾಗಿ ಮೊದಲ ಬಾರಿಗೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗಿತ್ತು. ಜತೆಗೆ ಭಾರಿ ಪೊಲೀಸ್ ಸರ್ಪಗಾವಲಿನ್ನು ಕೇರಳ ಸರ್ಕಾರ ನಿಯೋಜಿಸಿತ್ತು. ಆದರೆ ಶಬರಿಮಲೆ ಸುತ್ತಮುತ್ತ ಪ್ರತಿಭಟನಾಕಾರರ ಪ್ರಾಬಲ್ಯ ಮೆರೆದಿದ್ದು, ಪ್ರತಿಭಟನಕಾರರು ಮತ್ತು ಭಕ್ತರು ಹಗಲು, ರಾತ್ರಿಯನ್ನದೇ ಮಹಿಳಾ ಭಕ್ತರು ದೇಗುಲ ಪ್ರವೇಶಿಸದಂತೆ ಕಾವಲು ಕಾಯುತ್ತಿದ್ದಾರೆ.
ಪ್ರತಿಭಟನಕಾರರು ಹಲವು ತಂಡಗಳಾಗಿ ದೇಗುಲದ ಹೊರವಲಯ ಹಾಗೂ ಸುತ್ತಮುತ್ತ ಮಹಿಳಾ ಭಕ್ತರು ಒಳಹೋಗದಂತೆ ಕಾಯುತ್ತಿದ್ದರೆ, ಇನ್ನು ಕೆಲವರು ಪ್ರತಿಭಟನಕಾರರು ಅಯ್ಯಪ್ಪ ದೇಗುಲದ 18 ಮೆಟ್ಟಿಲು ಬಳಿಯೇ ಕಾವಲು ಕಾಯುತ್ತಿದ್ದಾರೆ. ಮತ್ತೆ ಕೆಲವರು ಪಂಪಾ ಮತ್ತು ನಿಲಕ್ಕಲ್ನಲ್ಲಿ ಬಿಡಾರ ಹೂಡಿದ್ದಾರೆ. ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವರು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಹೀಗಾಗಿ ರಕ್ಷಣೆಯ ಭರವಸೆ ನೀಡಿದ್ದ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ ವಿನಾಃ ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲ.
ಒಟ್ಟಾರೆ ದೇಗುಲ ಮತ್ತೆ ಬಾಗಿಲು ಮುಚ್ಚಿಕೊಳ್ಳುವುದರಿಂದ ಸೋಮವಾರ ಮಹಿಳಾ ಭಕ್ತರಿಗೆ ಮತ್ತು ಪ್ರತಿಭಟನಕಾರರಿಗೆ ನಿರ್ಣಾಯಕ ದಿನವಾಗಿದೆ.