ಉಡುಪಿ, ಅ 21(SM): ಮರಳು ನೀತಿಯನ್ನು ಸಡಿಲಗೊಳಿಸಿ, ತತ್ಕ್ಷಣದಿಂದ ಉಡುಪಿ ಜಿಲ್ಲೆಯಲ್ಲಿ ಮರಳು ತೆಗೆಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ, ಟಿಪ್ಪರ್ ಮಾಲಕರ ಸಂಘ ಮುಷ್ಕರಕ್ಕೆ ಕರೆ ನೀಡಿದ್ದು, ಭಾನುವಾರ ಕೋಟೇಶ್ವರದ ಮುಷ್ಕರ ನಿರತ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಭೇಟಿ ನೀಡಿದ್ದಾರೆ. ಹಾಗೂ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ್ದಾರೆ.
ಕೋಟೇಶ್ವರದ ಹೆದ್ದಾರಿ ಬದಿಯಲ್ಲಿ ಟಿಪ್ಪರ್ಗಳನ್ನು ನಿಲ್ಲಿಸಿ, ಮುಷ್ಕರ ನಡೆಸುತ್ತಿದ್ದ ಟಿಪ್ಪರ್ ಮಾಲಕರನ್ನು ಭೇಟಿಯಾದ ಸಚಿವರು ಸಮಸ್ಯೆ ಆಲಿಸಿದರು. ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮರಳು ತೆಗೆಯಲು ಅನುಮತಿ ನೀಡದ ಕಾರಣ ಅನೇಕ ಮಂದಿಗೆ ತೊಂದರೆಯಾಗುತ್ತಿದೆ. ಅಭಿವೃದ್ಧಿ ಕಾರ್ಯಕ್ಕೂ ತೊಡಕಾಗಿದೆ. ಜನಾಭಿಪ್ರಾಯಕ್ಕೆ ಮನ್ನಣೆ ಕೊಡದ ಜಿಲ್ಲಾಧಿಕಾರಿಯವರನ್ನು ವರ್ಗಾವಣೆ ಮಾಡಬೇಕು. ಜಿಲ್ಲೆಗೆ ಬೇರೆ ಜಿಲ್ಲಾಧಿಕಾರಿಗಳನ್ನು ನೇಮಕಗೊಳಿಸಿ. ಇದು ಹೀಗೆ ಮುಂದುವರಿದರೆ ಕೂಲಿ ಕಾರ್ಮಿಕರ ಸಹಿತ ಅನೇಕರು ಕೆಲಸವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ಕೂಡಲೇ ಮರಳು ತೆಗೆಯಲು ಅನುಮತಿ ಕೊಡಿ ಎನ್ನುವ ಆಗ್ರಹವನ್ನು ಉಸ್ತುವಾರಿ ಸಚಿವರ ಮುಂದಿಟ್ಟರು.
ಮುಷ್ಕರ ನಿರತರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಸಚಿವೆ ಡಾ. ಜಯಮಾಲಾ, ಈ ಸಂಬಂಧ ಸರಕಾರದ ಮಟ್ಟದಲ್ಲಿ ನಿರಂತರ ಮಾತುಕತೆಯಾಗುತ್ತಿದೆ. ಸೋಮವಾರವೇ ಡಿಸಿಯವರನ್ನು ಖುದ್ದಾಗಿ ಭೇಟಿಯಾಗಿ ಸಿಆರ್ಝಡ್ ಹಾಗೂ ನಾನ್ಸಿಆರ್ಝಡ್ ಎರಡರಲ್ಲೂ ಮರಳು ತೆಗೆಯಲು ಅನುಮತಿ ನೀಡಲು ಸೂಚಿಸುತ್ತೇನೆ ಎಂದವರು ಭರವಸೆ ನೀಡಿದರು.
ಕುಂದಾಪುರ ತಾಲೂಕು ಟಿಪ್ಪರ್ ಮಾಲಕರ ಸಂಘವು ಕುಂದಾಪುರ, ಕೋಟೇಶ್ವರ, ಹೆಮ್ಮಾಡಿ, ಶಂಕರನಾರಾಯಣ ಸಹಿತ ಅನೇಕ ಕಡೆಗಳಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದು, ಅ.18 ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ನಾಲ್ಕು ದಿನಗಳಿಂದ ನಿರಂತರವಾಗಿ ಮುಷ್ಕರ ಮುಂದುವರೆದಿದೆ.