ಕಡಬ, ಅ 21(SM): ಗೋವಿಂದ್ ಪನ್ಸಾರೆ ಹತ್ಯೆ, ಮಡಗಾಂವ್ ಸ್ಪೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಕಡಬದ ವ್ಯಕ್ತಿ ಸೇರಿದಂತೆ ಹಲವರ ಹೆಸರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಶನಿವಾರದಂದು ಪ್ರಕಟಿಸಿದೆ.
ದೇಶದಾದ್ಯಂತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡು ತಲೆಮರಿಸಿಕೊಂಡಿರುವ ಆರೋಪಿಗಳಲ್ಲೊಬ್ಬನಾದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಸೋಮರಾಜನ್ ಎಂಬವರ ಪುತ್ರ ಜಯಪ್ರಕಾಶ್ ಅಲಿಯಾಸ್ ಅಣ್ಣಾ(47) ಎಂಬಾತ ರಾಷ್ಟ್ರೀಯ ತನಿಖಾ ಸಂಸ್ಥೆಯ(NIA) ಮೋಸ್ಟ್ ವಾಂಟೆಡ್ ಆರೋಪಿಗಳಲ್ಲಿ ಓರ್ವ. ಆರೋಪಿಯು ಗೋವಾ ರಾಜ್ಯದ ಮಡಗಾಂವ್ ಎಂಬಲ್ಲಿ ೨೦೦೯ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿ ಆ ಬಳಿಕ ತಲೆಮರೆಸಿಕೊಂಡಿದ್ದಾನೆ.
ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದ ಜಯಪ್ರಕಾಶ್ ಬಳಿಕ ಮೂಲ್ಕಿಯಲ್ಲಿ "ಸನಾತನ ಹಿಂದೂ ಧರ್ಮ" ಪ್ರಚಾರದ ಸಂಸ್ಥೆಯ ವಾಹನದಲ್ಲಿ ಚಾಲಕನಾಗಿದ್ದ ಎನ್ನಲಾಗಿದೆ. ಮದುವೆಯಾದ ಬಳಿಕ ಊರು ಬಿಟ್ಟಿದ್ದ ಈತ ಮನೆಯವರ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗಿದ್ದಾನೆ.
ಈ ಬಗ್ಗೆ 2013 ಸೆಪ್ಟೆಂಬರ್ 18 ರಂದು ಹೈದರಾಬಾದ್ನಿಂದ ಕಡಬಕ್ಕೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ(NIA) ಅಧಿಕಾರಿಗಳು ಜಯಪ್ರಕಾಶ್ ಭಾವ ಚಿತ್ರದ ಪೋಸ್ಟರ್ಗಳನ್ನು ಕಂದಾಯ ಇಲಾಖೆಯ ಗೋಡೆಗೆ ಹಚ್ಚಿ ಮಹಜರು ನಡೆಸಿದ್ದರು. ಅಲ್ಲದೆ ಆರೋಪಿಯ ಸುಳಿವು ನೀಡಿದಲ್ಲಿ 25 ಸಾವಿರ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು.
ಇದೀಗ 2018 ಅಕ್ಟೋಬರ್ 20ರ ಶನಿವಾರದಂದು ರಾಷ್ಟ್ರೀಯ ತನಿಖಾ ಸಂಸ್ಥೆಯು ಲಷ್ಕರೆ ಉಗ್ರ ಸಂಘಟನೆಯ ಮುಖ್ಯಸ್ಥ ರೆಹಮಾನ್ ಲಖ್ವಿ, ಹಫೀಜ್ ಸಯೈದ್, ಸೇರಿದಂತೆ ಮತ್ತಿತರರ ಹೆಸರನ್ನು ಮೋಸ್ಟ್ ವಾಂಟೆಡ್ ಲಿಸ್ಟ್ ಗೆ ಸೇರ್ಪಡೆಗೊಳಿಸಿ ಎನ್.ಐ.ಎ. ವೆಬ್ ಸೈಟ್ ಹಾಗೂ ಟ್ವೀಟರ್ ಅಕೌಂಟ್ ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಎನ್.ಐ.ಎ. ಮನವಿ ಮಾಡಿದೆ.