ಪುಂಜಾಲಕಟ್ಟೆ, ಅ 21 (MSP): ಮನೆಯ ಹಿಂಬದಿಯ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಎರಡು ಮನೆಗಳಿಂದಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವು ಮಾಡಿದ ಘಟನೆ ಬಂಟ್ವಾಳದ ಇರ್ವತ್ತೂರು ಎಂಬಲ್ಲಿ ಅ.20ರ ಶನಿವಾರ ತಡರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ಎಡ್ತೂರುಪದವು ಸಮೀಪದ ಇರ್ವತ್ತೂರು ಗ್ರಾಮದ ಪಿ.ಎಸ್.ನಗರ ಎಂಬಲ್ಲಿ ಪಕ್ಕ ಪಕ್ಕದಲ್ಲಿ ಇರುವ ಎರಡು ಮನೆಗಳಿಂದ ಶನಿವಾರ ರಾತ್ರಿ ವೇಳೆಯಲ್ಲಿ ಕಳವು ಮಾಡಿದ್ದಾರೆ. ಇಲ್ಲಿನ ನಿವಾಸಿ ಹಸನಬ್ಬ ಹಾಗೂ ಇಸುಬು ಎಂಬವರ ಮನೆಯಿಂದ ಚಿಲಕ ಮುರಿದು ಕಳವು ಮಾಡಲಾಗಿದೆ. ಹಸನಬ್ಬ ಅವರ ಎರಡು ಅಂತಸ್ತಿನ ಮನೆಯ ಮೇಲಿನ ಮನೆಯ ಹಿಂಬದಿ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕೋಣೆಯ ಒಳಗಿನ ಕಪಾಟಿನಲ್ಲಿದ್ದ ಸುಮಾರು ನಲವತ್ತು ಪವನ್ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ.ಇವರ ಸಮೀಪದ ಇಸುಬು ಎಂಬವರ ಮನೆ ಹಿಂಬದಿಯಿಂದ ನುಗ್ಗಿದ ಕಳ್ಳರುಕಪಾಟಿನಲ್ಲಿದ್ದ ಸುಮಾರು 55 ಸಾವಿರ ರೂ ನಗದು ಕೊಂಡುಹೋಗಿದ್ದಾರೆ. ಜೊತೆಗೆ ಸಮೀಪದ ಮನೆಯ ಮೊಬೈಲ್ ಫೋನ್ ಕಳವಾಗಿದೆ ಎಂದು ಹೇಳಲಾಗುತ್ತದೆ.
ಬೆಳ್ತಂಗಡಿ ಸಿ.ಐ. ಸಂದೇಶ್ ಹಾಗೂ ಬಂಟ್ವಾಳ ಎ.ಎಸ್.ಪಿ.ಹ್ರಷಿಕೇಶ್ ಸೋನಾವಣೆ , ಪುಂಜಾಲಕಟ್ಟೆ ಠಾಣಾ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಬೇಟಿ ಪರಿಶೀಲನೆ ನಡೆಸಿದ್ದಾರೆ.