ಬೆಂಗಳೂರು, ಅ 21 (MSP):ಕಿಚ್ಚ ಸುದೀಪ್ ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟು ಕಟೌಟ್ ಹಾಗೂ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಯನದ 'ದಿ ವಿಲನ್ ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರದ ನಾಯಕರ ಅಭಿಮಾನಿಗಳು ಪೋಸ್ಟರ್ ಮುಂದೆ ಕೋಣ ಬಲಿಕೊಟ್ಟು ಅಂದಾಭಿಮಾನ ಪ್ರದರ್ಶಿಸಿದ್ದಾರೆ.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಖರವಾಗಿ ಯಾವ ಸ್ಥಳದಲ್ಲಿ ಈ ಘಟನೆ ನಡೆದಿದೆ ಎಂಬುದರ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ದುಷ್ಕೃತ್ಯ ನಡೆದಿದೆ ಎನ್ನುವ ಸಂಶಯ ವ್ಯಕ್ತವಾಗಿದೆ. ಕನ್ನಡ ಮಾತನಾಡುವ ಯುವಕರ ತಂಡ ಕೋಣದ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ ಬಳಿಕ ಆ ತಲೆಯನ್ನು ಹಿಡಿದು ಅಭಿಮಾನಿಯೊಬ್ಬ ವಿಲನ್ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡಿದ್ದ. ಈ ಯುವಕರು ಬಳಸಿದ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನೊಂದೆಡೆ ನೆಲಮಂಗಲದಲ್ಲಿ ಅಭಿಮಾನಿಗಳು ಮೇಕೆ ಬಲಿಕೊಟ್ಟು ಸುದೀಪ್ ಕಟೌಟ್ ಗೆ ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದಾರೆ.
ಈ ಎಲ್ಲಾ ಬೆಳವಣಿಗೆ ಕಂಡು ಸುದೀಪ್ ತಮ್ಮ ಅಭಿಮಾನಿಗಳ ಅಂದಾಭಿಮಾನದ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆಸಿದ್ದಾರೆ, ಪ್ರಾಣಿಬಲಿಯಂತಹ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಈ ರೀತಿಯ ವರ್ತನೆ ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.