ಬೆಂಗಳೂರು, ಅ 21 (MSP): ಕಳ್ಳರ ಕಣ್ಣು ಬೆಳೆಬಾಳುವ ವಸ್ತುಗಳ ಮೇಲೆ ಬೀಳುವುದು ಸಾಮಾನ್ಯ..ಹೀಗಾಗಿ ಇತ್ತೀಚೆಗೆ ವಾಹನ ಕಳ್ಳತನವಾಗುವ ಪ್ರಕರಣಗಳು ಹೆಚ್ಚು ಹೆಚ್ಚಾಗಿ ದಾಖಲಾಗುತ್ತಿದೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಕಣ್ಣು ರೋಡ್ ರೋಲರ್ ಮೇಲೆ ಬಿದ್ದು ಕಳ್ಳತನ ಮಾಡಿ ಕೊನೆಗೆ ಕಳ್ಳತನ ಮಾಡಿದ ವಸ್ತುವನ್ನು ಸಾಗಿಸುವುದೇ ಕಷ್ಟ ಎಂದು ಕೊನೆಗೆ ಬಿಟ್ಟು ಹೋದ ಘಟನೆ ನಡೆದಿದೆ.
ಟಿಂಬರ್ರ್ಯಾರ್ಡ್ ಲೇಔಟ್ನಲ್ಲಿ ಗುತ್ತಿಗೆದಾರ ಜ್ಯೋತಿಶ್ ಅವರು ತಮ್ಮ ಎರಡೂ ವಾಹನಗಳಾದ ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನವನ್ನು ಕೆಲಸ ಮುಗಿಸಿ ಸಂಜೆ ವೇಳೆ ನಿಲ್ಲಿಸಿದ್ದರು. ಆದ್ರೆ ರಾತ್ರಿ ಇದಕ್ಕಾಗಿ ಹೊಂಚು ಹಾಕಿದ ಕಳ್ಳರು ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನ ಕದ್ದು ಸಾಗಿಸಿದ್ದಾರೆ. ಇದು ಅವರೊಂದಿಗೆ ಕೆಲಸ ಮಾಡುತ್ತಿದ್ದ ಕೆಲವರ ದುಷ್ಕೃತ್ಯ ಎಂದು ಜ್ಯೋತಿಶ್ ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಕಳ್ಳರು ರೋಡ್ ರೋಲರ್ ಕದ್ದು ಕೊಂಡೊಯ್ದರು ಆದರೆ ಒಂದೆಡೆ ರಸ್ತೆಯುದ್ದಕ್ಕೂ ರೋಡ್ ರೋಲರ್ ಶಬ್ದ. ಇನ್ನೊಂದೆಡೆ ಕದ್ದ ವಾಹನವನ್ನು ವೇಗವಾಗಿ ಚಾಲನೆ ಮಾಡಲಾಗದ ಸ್ಥಿತಿ. ಕದ್ದ ವಸ್ತುವನ್ನು ಮುಚ್ಚಿಡುವುದಾದರೂ ಎಲ್ಲಿ .ಕೊನೆಗೆ ದಾರಿಕಾಣದೆ ರಸ್ತೆ ಬದಿಯಲ್ಲಿಯೇ ರೋಡ್ ರೋಲರ್ ಹಾಗೂ ಟಾರ್ ಸಿಂಪಡಿಸುವ ವಾಹನ ನಿಲ್ಲಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ.
ಇದೀಗ ಲಕ್ಷಾಂತರ ರೂ. ಮೌಲ್ಯದ ರೋಡ್ ರೋಲರ್ ಹಾಗೂ 17 ಲಕ್ಷ ರೂ. ಬೆಲೆಬಾಳುವ ಟಾರ್ ಸಿಂಪಡಿಸುವ ವಾಹನಗಳು ಮರಳಿ ಅದರ ಮಾಲೀಕ ಜ್ಯೋತಿಶ್ ಅವರ ಕೈ ಸೇರಿವೆ. ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.