ಬೆಂಗಳೂರು, ಅ 21 (MSP):ಇನ್ನು ಪೊಲೀಸ್ ಇಲಾಖೆಯ ಎಲ್ಲಾ ಮಹಿಳಾ ಸಿಬ್ಬಂದಿ ಕರ್ತವ್ಯದ ಸಂದರ್ಭದಲ್ಲಿ ಪ್ಯಾಂಟ್–ಶರ್ಟ್ ಸಮವಸ್ತ್ರವನ್ನೇ ಧರಿಸಬೇಕು. ಈ ಸಂಬಂಧ ಅ.16ರಂದು ಸುತ್ತೋಲೆ ಹೊರಡಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು, ಮಹಿಳಾ ಪೊಲೀಸರಿಗಾಗಿ ಕೆಲ ನಿಯಮಗಳನ್ನು ರೂಪಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳು ಸೀರೆಯನ್ನು ಧರಿಸುವಂತಿಲ್ಲ, ಗಾಜಿನ ಬಳೆ ತೊಡುವಂತಿಲ್ಲ, ಹೂವು ಮುಡಿಯುವಂತಿಲ್ಲ. ಕೂದಲು ಹರಡಿಕೊಂಡು ಓಡಾಡುವಂತಿಲ್ಲ.
ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಿಸುವ ಮಹಿಳಾ ಅಧಿಕಾರಿ/ಸಿಬ್ಬಂದಿ ಕೆಲಸದ ವೇಳೆಯಲ್ಲಿ ಸೀರೆಯ ಬದಲು ಪ್ಯಾಂಟ್–ಶರ್ಟ್ ಸಮವಸ್ತ್ರವನ್ನೇ ಧರಿಸಬೇಕು ಎಂದು ನೀಲಮಣಿ ಎನ್.ರಾಜು ಸೂಚಿಸಿದ್ದಾರೆ. ಇದಲ್ಲದೆ ಇನ್ನಷ್ಟು ಸೂಚನೆಗಳನ್ನು ನೀಡಿರುವ ಅವರು ಮಹಿಳಾ ಸಿಬ್ಬಂದಿಗಳು, ಗಾಜಿನ ಬಳೆಗಳನ್ನು ಧರಿಸುವಂತಿಲ್ಲ ಅದರ ಬದಲಾಗಿ ಸಣ್ಣ ಗಾತ್ರದ ಲೋಹದ ಬಳೆಗಳನ್ನು ಹಾಕಿಕೊಳ್ಳಬಹುದು ಎಂದು ಆದೇಶಿಸಿದ್ದಾರೆ. ಕೂದಲನ್ನು ತುರುಬು ಕಟ್ಟಿಕೊಂಡು ಕಪ್ಪು ಬಣ್ಣದ ಬ್ಯಾಂಡ್ ಹಾಕಿಕೊಳ್ಳಬೇಕು, ಬೇರೆ ಯಾವುದೇ ಬಣ್ಣದ ಹೇರ್ ಪಿನ್ , ಬ್ಯಾಂಡ್ ಗಳನ್ನು ಹಾಕಿಕೊಳ್ಳಬಾರದು, ಹೇರ್ ಡೈ ಮಾಡುವವರಿದ್ದರೆ ಕಪ್ಪು ಬಣ್ಣದ ಹೇರ್ ಡೈ ಮಾತ್ರ ಬಳಸಬೇಕು , ಹೂವು ಅಥವಾ ಇನ್ಯಾದೇ ಕೇಶವಿನ್ಯಾಸದ ವಸ್ತುಗಳನ್ನು ಧರಿಸುವಂತಿಲ್ಲ, ಕಿವಿಗೆ ಧರಿಸಿಸುವ ಅಭರಣ ಸಣ್ಣದಾಗಿರಬೇಕು ಹಾಗೂ ಹಣೆಗೆ ಧರಿಸುವ ಬಿಂದಿಯೂ ಸಣ್ಣ ಗಾತ್ರದ್ದಾಗಿರಬೇಕು ಎಂದು ಅವರು ಸೂಚಿಸಿದ್ದಾರೆ.
ಈ ಸುತ್ತೋಲೆಯನ್ನು ಹೊರಡಿಸುವ ಮೊದಲು ಮಹಿಳಾ ಸಿಬ್ಬಂದಿಯ ಅಭಿಪ್ರಾಯಗಳನ್ನು ಪಡೆದು, ಉನ್ನತ ಮಟ್ಟದ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿಗಳು, ಅಪರಾಧ ಸ್ಥಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ , ಕೈದಿಗಳನ್ನು ಬೆಂಗಾವಲಿನಲ್ಲಿ ಕರೆದೊಯ್ಯುವಾಗ, ಬಂದೋಬಸ್ತ್ ಕರ್ತವ್ಯ ನಿರ್ವಹಿಸುವಾಗ ಅಲ್ಲದೆ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ಸಂದರ್ಭಗಳಲ್ಲಿ ಸಿಬ್ಬಂದಿಗಳು ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದೆಲ್ಲವನ್ನು ಸೀರೆಯುಟ್ಟು ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ಯಾಂಟ್–ಶರ್ಟ್ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ’ ಎಂದು ಡಿಜಿಪಿ ಆದೇಶದಲ್ಲಿ ಹೇಳಿದ್ದಾರೆ. ಆದರೆ ಬಗ್ಗೆ ಪರ–ವಿರೋಧದ ಚರ್ಚೆ ಇಲಾಖೆಯಲ್ಲಿ ಆರಂಭವಾಗಿದೆ.