ಚೆನ್ನೈ, ಅ20(SS): ಶ್ರೀ ಸ್ವಾಮಿ ಅಯ್ಯಪ್ಪ ಸ್ವಾಮಿಯ ದೇಗುಲ ಶಬರಿಮಲೆ ಪ್ರವೇಶದ ವಯಸ್ಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯದಲ್ಲಿ ಯಾರೊಬ್ಬರು ಹಸ್ತಕ್ಷೇಪ ಮಾಡಬಾರದೆಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಅನಾದಿಕಾಲದಿಂದಲೂ ನಮ್ಮ ಸಮಾಜದಲ್ಲಿ ಆಚರಣೆಗಳು ನಡೆದುಕೊಂಡು ಬಂದಿದ್ದು, ಅವುಗಳನ್ನು ಗಂಭೀರವಾಗಿ ತೆಗೆದುಕೊಂಡು ಪಾಲಿಸಬೇಕಾಗುತ್ತದೆ. ವಯಸ್ಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯದಲ್ಲಿ ಯಾರೊಬ್ಬರು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ನಾನು ಸುಪ್ರೀಂಕೋರ್ಟ್ ತೀರ್ಪಿಗೆ ಗೌರವ ನೀಡುತ್ತೇನೆ. ಆದರೆ ಶಬರಿಮಲೆ ಆಚರಣೆಗಳು ಪವಿತ್ರವಾಗಿವೆ. ಯಾರೂ ಅದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಿಳೆಯರು ಸೇರಿದಂತೆ ಬುಧವಾರ ಸಂಜೆ 5 ಗಂಟೆಯಿಂದ ಶಬರಿಮಲೆ ಬಾಗಿಲು ತೆರೆಯಲಾಗಿದೆ. ಆದರೆ, 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಪ್ರತಿಭಟನಾಕಾರರು ಅವಕಾಶ ನೀಡಿಲ್ಲ. ಅಯ್ಯಪ್ಪ ದರ್ಶನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ನಂತರ ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ.