ಬೆಂಗಳೂರು, ಅ20(SS): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಹೆಚ್ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಐದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಾನು ಹಾಗೂ ಸಿದ್ದರಾಮಯ್ಯ 12 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಇದ್ದೇವೆ. 3 ಲೋಕಸಭೆ, 2 ಅಸೆಂಬ್ಲಿ ಉಪಚುನಾವಣೆಯಲ್ಲಿ ಮತ್ತೊಮ್ಮೆ ಜಾತ್ಯಾತೀತ ಶಕ್ತಿ ಗೆಲ್ಲಬೇಕಿದೆ. ಐದು ಕ್ಷೇತ್ರದ ಗೆಲುವಿನ ಮೂಲಕ ಮುಂದಿನ ಲೋಕಸಭೆ ಚುನಾವಣೆ ಗೆಲುವಿಗೆ ಅಡಿಪಾಯ ಹಾಕಬೇಕಿದೆ. ಮುಂದಿನ ದೇಶದ ಬದಲಾವಣೆ ರಾಜ್ಯದಿಂದಲೇ ಆಗಬೇಕಿದೆ. ಅದಕ್ಕಾಗಿ ನಾವು ಒಂದಾಗಿದ್ದೇವೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಒಂದಾಗಿದ್ದೇವೆ. ನ.3 ರಂದು ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಗೆಲ್ಲಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕೇಂದ್ರ ಸರ್ಕಾರ ಜನಪರ ಕಾರ್ಯಕ್ರಮ ಘೋಷಿಸಿದೆ. ಆದರೆ ಇದುವರೆಗೆ ಯಾವುದು ಅನುಷ್ಠಾನವಾಗಿಲ್ಲ. ಕೊಡಗಿನಲ್ಲಿ ನಷ್ಟವಾದರೂ ನೆನಪಿಸಿಕೊಳ್ಳಲಿಲ್ಲ. ಸದ್ಯ, ದೇಶದ ಚಿತ್ರಣವೇ ಬದಲಾಗಿದ್ದು, ಐದೂ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಮುಂದೆ 28 ಲೋಕಸಭಾ ಕ್ಷೇತ್ರಗಳಲ್ಲಿ ಸಹ ಗೆಲುವು ಸಾಧಿಸುವ ಮೂಲಕ ದೇಶದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ತರುತ್ತೇವೆ ಎಂದರು.