ಬೆಂಗಳೂರು, ಅ20(SS): ಸುಪ್ರೀಂಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಬಹುದು ಎಂದು ತೀರ್ಪು ನೀಡಿದ್ದು, ಈ ತೀರ್ಪಿಗೆ ಕೇರಳದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಮಾತ್ರವಲ್ಲ, ಮಹಿಳೆಯರು ದೇಗುಲ ಪ್ರವೇಶಿಸುವುದಕ್ಕೆ ತೀವ್ರ ಪ್ರತಿರೋಧ ಒಡ್ಡಲಾಗಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕೇರಳದಲ್ಲಿನ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಪ್ರತಿಯೊಬ್ಬರು ಸುಪ್ರೀಂಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಮೂರನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಪರಿಣಾಮ ಪ್ರಶಾಂತವಾದ ಶಬರಿಮಲೆ ವಾತಾವರಣ ಕಳೆದ ಎರಡು ದಿನಗಳಿಂದ ಯುದ್ಧ ಭೂಮಿಯಾಗಿ ಬದಲಾಗಿದೆ.