ಮಂಗಳೂರು, ಅ20(SS): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ವೈಭವದ 'ಮಂಗಳೂರು ದಸರಾ' ಸಂಪನ್ನಗೊಂಡಿದೆ.
ಇದೀಗ ವೈಭವದ ದಸರಾ ಶೋಭಾ ಯಾತ್ರೆ ಸಂಪನ್ನಗೊಂಡಿದ್ದರೂ, ಸ್ತಬ್ಧಚಿತ್ರವೊಂದು ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದು ತುಳುನಾಡಿನ ಆರಾಧ್ಯ ದೈವವಾಗಿ “ಕೊರಗಜ್ಜ' ಎಂದು ಕರೆಯಲ್ಪಡುವ ಕೊರಗ ತನಿಯನ ಸ್ತಬ್ಧಚಿತ್ರ. ತುಳುನಾಡಿನಲ್ಲಿ ಅತ್ಯಂತ ಕಾರಣಿಕ ಶಕ್ತಿಯನ್ನು ಹೊಂದಿರುವ ದೈವ ಕೊರಗಜ್ಜ. ನಮ್ಮ ಏನೇ ವಸ್ತುಗಳು ಕಳವಾದರೂ ಕೂಡ ದೈವ ಕೊರಗಜ್ಜನಿಗೆ ಹರಕೆ ಹೇಳಿದರೆ ಸಾಕು, ಮರುಕ್ಷಣದಲ್ಲಿ ಅದು ಲಭಿಸುತ್ತದೆ ಎನ್ನುವುದು ತುಳುವರ ನಂಬಿಕೆ. ಜಾತಿ – ಧರ್ಮದ ಬೇಧವಿಲ್ಲದೆ ಎಲ್ಲರ ಅಚ್ಚರಿಗೆ ಕಾರಣವಾಗಿರುವ ಕೊರಗಜ್ಜನ ಸ್ತಬ್ಧಚಿತ್ರ ಈ ಬಾರಿ ಮಂಗಳೂರು ದಸರಾಕ್ಕೆ ವಿಶೇಷ ಮೆರಗು ನೀಡಿದೆ.
ಮಂಗಳೂರಿನ ಪದುವ ಫ್ರೆಂಡ್ಸ್ ಕ್ಲಬ್ (ರಿ) ಎಂಬ ಸಂಘಟನೆಯ ಸ್ತಬ್ಧಚಿತ್ರ ಇದಾಗಿದ್ದು, ಸತತ ನಾಲ್ಕು ವರುಷಗಳಿಂದ ಮಂಗಳೂರು ದಸರಾದಲ್ಲಿ ಈ ಸಂಘಟನೆಯು ತುಳುನಾಡಿನ ಆಚರಣೆ, ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡುತ್ತಿದೆ. ಇದೀಗ ಈ ಬಾರಿಯ ಮಂಗಳೂರು ದಸರಾದಲ್ಲಿ ಕೊರಗಜ್ಜ ದೈವದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆದಿದ್ದು, ಪದುವ ಫ್ರೆಂಡ್ಸ್ ಕ್ಲಬ್ ಸಂಘಟನೆಯ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.
ಇಷ್ಟೇ ಅಲ್ಲದೇ 100ಕ್ಕೂ ಅಧಿಕ ವೇಷಭೂಷಣ, ವಾದ್ಯಮೇಳ ತಂಡ, ಭಜನಾ ತಂಡಗಳು, ಗೊಂಬೆ ಕುಣಿತದ ತಂಡಗಳು, ಹುಲಿ ಕುಣಿದ ತಂಡ, ಭಾಗವಹಿಸಿದ್ದವು. ವಿವಿಧೆಡೆ ಆರ್ಕೆಸ್ಟ್ರಾ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೆರವಣಿಗೆ ಸಾಗಿ ಬರುವ ಬೀದಿಗಳಲ್ಲಿ ವರ್ಣರಂಜಿತ ದೀಪಗಳ ಸಾಲು, ನಾರಾಯಣಗುರು ಭಾವಚಿತ್ರವಿರುವ ಹಳದಿ ಬಣ್ಣದ ಪತಾಕೆಗಳ ತೋರಣ, ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ ಆವರಿಸಿತ್ತು. ಸಾಲುಸಾಲು ಕೇರಳ ಶೈಲಿ ಕೊಡೆಗಳು, ವಿವಿಧ ಬೊಂಬೆಗಳು, ಕರ್ನಾಟಕದ ಜಾನಪದ ವೈವಿಧ್ಯ ಸಾರುವ ಡೊಳ್ಳುಕುಣಿತ, ನರ್ತನಗಳೊಂದಿಗೆ ಕೇರಳ ಚೆಂಡೆ, ಸ್ಥಳೀಯ ಚೆಂಡೆಗಳು, ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕತೆಗಳ ಸಂದರ್ಭಗಳನ್ನು ವ್ಯಕ್ತಪಡಿಸುವ 75ಕ್ಕೂ ಹೆಚ್ಚು ಸ್ತಬ್ಧಚಿತ್ರ, ಬ್ಯಾಂಡ್ಸೆಟ್ಗಳು ಮೆರವಣಿಗೆ ಹುರುಪು ಹೆಚ್ಚಿಸಿದವು.
ಮೆರವಣಿಗೆಯಲ್ಲಿ ಸೇರಿದವರಲ್ಲದೆ ಇಕ್ಕೆಲಗಳಲ್ಲಿರುವ ಕಟ್ಟಡಗಳಲ್ಲೂ ಜನ ನಿಂತು ಶೋಭಾಯಾತ್ರೆಯ ಜೊತೆಗೆ ಕೊರಗಜ್ಜ ದೈವದ ಸ್ತಬ್ಧಚಿತ್ರ ನೋಡಿ ಕಣ್ತುಂಬಿಕೊಂಡರು.