ಕಾಸರಗೋಡು, ಅ20(SS): ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಜಾಕ್ (63) ಇಂದು ಮುಂಜಾನೆ ಕಾಸರಗೋಡಿನ ನುಳ್ಳಿಪಾಡಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಸೌಖ್ಯದ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶಾಸಕ ಪಿ. ಬಿ ಅಬ್ದುಲ್ ರಜಾಕ್ ಕೊನೆಯುಸಿರೆಳೆದಿದ್ದಾರೆ.
2001ರಿಂದ ಮಂಜೇಶ್ವರ ಶಾಸಕರಾಗಿದ್ದ ಇವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ, 2 ಬಾರಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಮಾತ್ರವಲ್ಲ, ಮುಸ್ಲಿಂ ಲೀಗ್ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದರು. 2001ರಲ್ಲಿ ಮೊದಲ ಬಾರಿ ಮಂಜೇಶ್ವರದಿಂದ ಶಾಸಕರಾಗಿ ಆಯ್ಕೆಯಾದ ಇವರು, 2017ರಲ್ಲಿ 2ನೇ ಬಾರಿ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ವಿರುದ್ಧ 89 ಮತಗಳ ಅಂತದಿಂದ ಗೆಲುವು ಸಾಧಿಸಿ ಕೇರಳ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಜೊತೆಗೆ ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2011ರಲ್ಲಿ ಸಿಪಿಎಂ ಪಕ್ಷದ ಸಿ. ಎಚ್ ಕುಞ೦ಬು ಅವರನ್ನು 5828 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2016ರಲ್ಲಿ ಎರಡನೇ ಬಾರಿ ಪ್ರಬಲ ಪೈಪೋಟಿಯಲ್ಲಿ ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು ಸೋಲಿಸಿದ್ದರು.ವಿಧಾನ ಸಭೆಯಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ, ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಾಗಿದ್ದಾರೆ. ಸರಳ ಸ್ವಭಾವದವರಾಗಿದ್ದ ಅವರು ಪಕ್ಷ, ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಕಾಸರಗೋಡು ಸಂಯುಕ್ತ ಜಮಾಅತ್ ಕಾರ್ಯಾಧ್ಯಕ್ಷ, ನೆಲ್ಲಿಕ್ಕಟ್ಟ ನೀರ್ಚಾಲ್ ಜಮಾಅತ್ ಅಧ್ಯಕ್ಷ, ಆಲಂಪ್ಪಾಡಿ ನೂರುಲ್ ಇಸ್ಲಾಮಿಕ್ ಯತೀಂಖಾನ ಉಪಾಧ್ಯಕ್ಷರಾಗಿಯೂ ಪಿಬಿ ಅಬ್ದುಲ್ ರಝಾಕ್ ಸೇವೆ ಸಲ್ಲಿಸಿದ್ದಾರೆ.
ಪಾರ್ಥಿವ ಶರೀರವನ್ನು ನಾಯಮ್ಮರ ಮೂಲೆಯಲ್ಲಿರುವ ಸ್ಗ್ರಹಕ್ಕೆ ತರಲಾಗಿದ್ದು, ಅಂತಿಮ ದರ್ಶನ ಪಡೆಯಲು ಜನಪ್ರವಾಹವೇ ಹರಿದು ಬರುತ್ತಿದೆ. ಸಂಜೆ 6 ಗಂಟೆಗೆ ಆಲಂಪಾಡಿ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.