ತಿರುವನಂತಪುರಂ, ಅ19(SS): ಮೇರಿ ಸ್ವೀಟಿ ಎಂಬ ಮಹಿಳೆಯೊಬ್ಬರು ಶಬರಿಮಲೆ ದೇಗುಲಕ್ಕೆ ತೆರಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಭಾರಿ ಪ್ರತಿಭಟನೆಗಳ ನಡುವೆಯೇ ಶಬರಿಮಲೆ ಬೆಟ್ಟ ಹತ್ತಿದ್ದ ಹೈದರಾಬಾದ್ನ ಒಬ್ಬರು ಮಹಿಳಾ ಪತ್ರಕರ್ತೆ ಹಾಗೂ ರೆಹಾನಾ ಫಾತಿಮಾ ಎಂಬ ಮುಸ್ಲಿಂ ಮಹಿಳೆ ದೇಗುಲಕ್ಕೆ ತೆರಳದೆ ವಾಪಸಾಗಿದ್ದಾರೆ. ಪೊಲೀಸರ ಭಾರಿ ಭದ್ರತೆ ನಡುವೆ ಶಬರಿಮಲೆ ಬೆಟ್ಟ ಹತ್ತಿದ್ದ ಇಬ್ಬರು ಮಹಿಳೆಯರು ಸನ್ನಿಧಾನಕ್ಕೆ ತೆರಳದೆ ವಾಪಸಾಗಲು ಒಪ್ಪಿಕೊಂಡಿದ್ದಾರೆ. ಆ ಮಹಿಳೆಯರೊಂದಿಗೆ ಐಜಿಪಿ ಶ್ರೀಜಿತ್ ಮಾತುಕತೆ ನಡೆಸಿದ್ದು, ಬಳಿಕ ಬೆಟ್ಟದಿಂದ ಕೆಳಗಿಳಿಯಲು ಒಪ್ಪಿಕೊಂಡರು.
ಇದೀಗ ಮೇರಿ ಸ್ವೀಟಿ ಎಂಬ ಮಹಿಳೆಯೊಬ್ಬರು ಪೊಲೀಸರ ಭದ್ರತೆಯಿಲ್ಲದೆ ತೆರಳಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳಾ ಭಕ್ತೆಯ ಮನೆಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಈ ನಡುವೆ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಲು ಯತ್ನಿಸಿದರೆ ಅಯ್ಯಪ್ಪ ದೇವಸ್ಥಾನದ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಶಬರಿಮಲೆಯ ಪ್ರಮುಖ ತಂತ್ರಿ ಎಚ್ಚರಿಸಿದ್ದಾರೆ.