ಮಂಗಳೂರು, ಅ19(SS): ಮಹಾಮಳೆ ಮತ್ತು ಚಂಡಮಾರುತ ಭೀತಿಯಿಂದ ಕಳೆದ ಹಲವು ದಿನಗಳಿಂದ ಮೀನುಗಾರಿಕೆ ಮೇಲೆ ಬೀಳುತ್ತಿರುವ ಹೊಡೆತದ ಪರಿಣಾಮ ಮೀನುಗಾರರು ಈ ಬಾರಿ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಒಂದೆಡೆ ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಭೀತಿ ಇದ್ದರೆ, ಬಳಿಕ ತಿತ್ಲಿ ಚಂಡಮಾರುತದ ಭಯವೂ ಮೀನುಗಾರರನ್ನು ಕಾಡುತ್ತಿದೆ. ಅಕ್ಟೋಬರ್ 7ರಿಂದ 13ರವರೆಗೆ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ಸಮುದ್ರ ಅಬ್ಬರಿಸಲಿದೆ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ 1 ವಾರಗಳ ಕಾಲ ಮೀನುಗಾರಿಕೆ ನಡೆಸದಂತೆ ಸರಕಾರ ಆದೇಶಿಸಿತ್ತು.
ಸಮುದ್ರದಲ್ಲಿ ಅಬ್ಬರ ಕಾಣಿಸಿಕೊಂಡಿದ್ದರಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ. ಪರಿಣಾಮಮ, ಮಂಗಳೂರು ಬಂದರಿನ ಮೂಲಕ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸುಮಾರು ಒಂದು ಸಾವಿರದಷ್ಟು ಬೋಟ್ಗಳು ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿದ್ದವು. ಸುಮಾರು 1 ವಾರಗಳ ಕಾಲ ಇಂತಹ ಪರಿಸ್ಥಿತಿ ಇದ್ದ ಕಾರಣ ಮೀನುಗಾರಿಕೆ ನಡೆಸದೆ ಮೀನುಗಾರಿಕಾ ಉದ್ಯಮಕ್ಕೆ ಪೆಟ್ಟು ಬಿದ್ದಿತ್ತು.
ಇದೀಗ ಮಹಾಮಳೆ ಮತ್ತು ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ, ಮಂಗಳೂರಿನ ಮೀನುಗಾರಿಕಾ ಉದ್ಯಮಕ್ಕೆ40 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ತಿಳಿದು ಬಂದಿದೆ.