ತಿರುವನಂತಪುರಂ, ಅ19(SS): ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದೇ ಆದರೆ ತಾವು ದೇಗುಲದ ದ್ವಾರವನ್ನು ಮುಚ್ಚಿಬಿಡುತ್ತೇವೆ ಎಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರುಷಗಳ ಇತಿಹಾಸವಿರುವ ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳಾ ಪತ್ರಕರ್ತೆಯರು ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆಂಧ್ರ ಪ್ರದೇಶ ಮೂಲದ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆಯತ್ತ ಪ್ರಯಾಣ ಆರಂಭಿಸಿ ದೇಗುಲದ ಪ್ರವೇಶ ದ್ವಾರದ ಬಳಿ ತಲುಪಿದ್ದರು.
ಈ ಹಿನ್ನೆಲೆಯಲ್ಲಿ, ಮಹಿಳೆಯರು ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದೆ. ಸ್ವತಃ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಬರಿಲಮಯೆ ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸತ್ತರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.