ಮಂಗಳೂರು, ಅ 18(SM): ಫ್ರೆಂಡ್ಸ್ ಬಲ್ಲಾಳ್ಭಾಗ್, ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ಶೋಭಾಯಾತ್ರೆಯ ದಿನದಂದು ಮಧ್ಯಾಹ್ನ 2.30ಕ್ಕೆ ಬಳ್ಳಾಲ್ಭಾಗ್ ವೃತ್ತದ ಬಳಿ ನಿರ್ಮಿಸಿದ ವೇದಿಕೆಯಲ್ಲಿ ಅನಾರೋಗ್ಯ ಪೀಡಿತ 25 ಮಂದಿಗೆ 15 ಲಕ್ಷದವರೆಗೆ ಹಣವನ್ನು ಹಸ್ತಾಂತರಿಸಲಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ರಾಕೇಶ್ ಪೂಜಾರಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ 4 ವರ್ಷಗಳಿಂದ ಫ್ರೆಂಡ್ಸ್ ಬಳ್ಳಾಲ್ ಭಾಗ್, ಬಿರುವೆರ್ ಕುಡ್ಲ ಸಂಸ್ಥೆ ಬಡಜನತೆಗೆ ಹತ್ತು ಹಲವು ರೀತಿಯಲ್ಲಿ ನೆರವಾಗುತ್ತಿದೆ. ಪ್ರತಿ ತಿಂಗಳು ಅರ್ಹ ಅನಾರೋಗ್ಯ ಪೀಡಿತರಿಗೆ 50ರಿಂದ 1 ಲಕ್ಷ ರೂಪಾಯಿವರೆಗೆ ನೀಡುತ್ತಿದ್ದಾರೆ. ಅಲ್ಲದೆ ಕೇಂದ್ರ ಸಮಿತಿ ವತಿಯಿಂದ 90 ಸಾವಿರಕ್ಕೂ ಅಧಿಕ ಧನ ಸಹಾಯ ಮಾಡಲಾಗಿದೆ.
ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ. ಕಳೆದ ವರ್ಷ ಮಂಗಳೂರು ದಸರಾ ಹಬ್ಬದಂಗವಾಗಿ ಬಳ್ಳಾಲ್ ಭಾಗ್ ವೃತ್ತದ ಬಳಿಯ ವೇದಿಕೆಯಲ್ಲಿ ಸಾರ್ವಜನಿಕರ ಮನೋರಂಜನೆಗಾಗಿ ಹುಲಿವೇಷ ಕುಣಿತ ಆಯೋಜಿಸಿ ಅಲ್ಲಿ ಸಂಗ್ರಹವಾದ ಸುಮಾರು 4 ಲಕ್ಷ ಹಣವನ್ನು ಅರ್ಹ ಅನಾರೋಗ್ಯ ಪೀಡಿತರಿಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ದಸರಾ ಅಂಗವಾಗಿ ಕಳೇದ 4 ವರ್ಷಗಳಿಂದ 6 ವರ್ಣರಂಜಿತ ಟ್ಯಾಬ್ಲೋಗಳು ಹೊರಡುತ್ತಿವೆ. ಅಲ್ಲದೆ, ಈ ವರ್ಷ ಡಿಸೆಂಬರ್ ತಿಂಗಳ 2ನೇ ತಾರೀಕಿನಂದು ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಹಿಂದೂ ಧರ್ಮದ 10 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ನವೆಂಬರ್ 10ರ ತನಕ ಈ ವಿವಾಹ ಸಮಾರಂಭಕ್ಕೆ ನೋಂದಣಿಗೆ ಅವಕಾಶ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ವಿದ್ಯಾ ರಾಕೇಶ್, ಕಿಶೋರ್, ದೀಪು ಶೆಟ್ಟಿಗಾರ್ ಮೊದಲಾದವರಿದ್ದರು.