ಉಳ್ಳಾಲ, ಆ 04 (DaijiworldNews/PY): ಉಗ್ರರ ಜೊತೆ ನಂಟು ಆರೋಪದ ಹಿನ್ನೆಲೆ ಮಾಜಿ ಶಾಸಕರೋರ್ವರ ಮಗನ ಮನೆ ಮೇಲೆ ಜುಲೈ 4ರ ಬುಧವಾರದಂದು ಎನ್ಐಎ ದಾಳಿ ನಡೆಸಿದೆ.
ಬೆಂಗಳೂರಿನಿಂದ ಬಂದ ಎನ್ಐಎ ಅಧಿಕಾರಿಗಳ ತಂಡ ಮಾಜಿ ಶಾಸಕ ಬಿ. ಎಂ ಇದಿನಬ್ಬ ಅವರ ಮಗ ಬಿ. ಎಂ ಪಾಷ ಅವರ ಉಳ್ಳಾಲದಲ್ಲಿರುವ ಮನೆ ಮೇಲೆ ದಾಳಿ ನಡೆಸಿದೆ.
ಸಿರಿಯ ಮೂಲದ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ಬಿ.ಎಂ ಪಾಷಾ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಕಟ್ಟೆಗೆ ಆಗಮಿಸಿದ್ದು, ಎನ್ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡಾ ಭದ್ರತೆ ಒದಗಿಸಿದ್ದಾರೆ.
ಇದಿನಬ್ಬ ಅವರ ಪುತ್ರ ಬಿ. ಎಂ ಬಾಷಾ ಅವರು ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
ಹತ್ತು ವರ್ಷಗಳ ಹಿಂದೆ ಇದಿನಬ್ಬ ಅವರ ಪುತ್ರಿಯೋರ್ವಳು ಕೇರಳದಲ್ಲಿ ನಾಪತ್ತೆಯಾಗಿದ್ದು, ಐಸಿಸ್ ಸಂಘಟನೆ ಸೇರಿದ್ದಾಗಿ ಹೇಳಲಾಗಿತ್ತು.
ಐಸಿಸ್ ಸಂಪರ್ಕ ಹಾಗೂ ಜಮ್ಮು-ಕಾಶ್ಮೀರದ ಉಗ್ರ ಸಂಘಟನೆ ಯುವಕರೊಂದಿಗೆ ಮೊಬೈಲ್ ಸಂಪರ್ಕ ಇರುವ ಮಾಹಿತಿಯ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.