ಉಳ್ಳಾಲ, ಆ.03 (DaijiworldNews/HR): ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಕೊರೊನಾ ನೆಗೆಟಿವ್ ವರದಿ ರಹಿತರಿಗೆ ಕರ್ನಾಟಕ ಗಡಿ ಪ್ರವೇಶಕ್ಕೆ ತಲಪಾಡಿ ಗಡಿಯಲ್ಲಿ ತುರ್ತು ಅಗತ್ಯ ವಾಹನಗಳನ್ನು ಹೊರತು ಪಡಿಸಿ ಇತರ ವಾಹನ ಸಂಚಾರಕ್ಕೆ ಮಂಗಳವಾರ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ತಲಪಾಡಿ ಗಡಿಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿ "ನೆಗೆಟಿವ್ ರಿಪೋರ್ಟ್ ಇಲ್ಲದೇ ಗಡಿ ಪ್ರವೇಶಕ್ಕೆ ಅನುಮತಿ ನೀಡಬೇಡಿ" ಎಂದು ಖಡಕ್ ಸೂಚನೆ ನೀಡಿದ್ದಾರೆ.
ತಲಪಾಡಿ ಗಡಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಎಡಿಜಿಪಿ ಪ್ರತಾಪ್ ರೆಡ್ಡಿ, ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಸೇರಿ ತಪಾಸಣೆ ಬಗ್ಗೆ ಮಾಹಿತಿ ಪಡೆದು, ನೆಗೆಟಿವ್ ರಿಪೋರ್ಟ್ ಇಲ್ಲದೇ ಗಡಿ ಪ್ರವೇಶ ಕೊಡಬೇಡಿ ಎಂದು ಸೂಚಿಸಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ದ.ಕ ಜಿಲ್ಲಾಧಿಕಾರಿಗಳಿಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಇನ್ನು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪ್ರತಾಪ್ ರೆಡ್ಡಿಗೆ ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಸೇರಿ ತಪಾಸಣೆ ಬಗ್ಗೆ ಮಾಹಿತಿ ನೀಡಿದ್ದು, ಈ ವೇಳೆ ಮಂಗಳೂರು ಕಮಿಷನರ್ ಶಶಿಕುಮಾರ್, ಎಸ್ಪಿ ಖುಷಿಕೇಷ್ ಸೋನಾವಣೆ ಸಾಥ್ ನೀಡಿದ್ದಾರೆ.
ತಲಪಾಡಿ ಗಡಿಯಲ್ಲಿ ತುರ್ತು ಅಗತ್ಯ ವಾಹನಗಳನ್ನು ಹೊರತು ಪಡಿಸಿ ಇತರ ವಾಹನ ಸಂಚಾರಕ್ಕೆ ಇಂದಿನಿಂದ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಕೇರಳದಿಂದ ರಾಜ್ಯಕ್ಕೆ ಪ್ರವೇಶ ನಿಷೇಧವನ್ನು ಯುಡಿಎಫ್ ವಿರೋಧಿಸಿ ಸೋಮವಾರ ಪ್ರತಿಭಟಿಸಿದ್ದು, ಎಲ್ಡಿಎಫ್ ಹಾಗೂ ಸಂಯುಕ್ತ ಜನತಾ ದಳ ಸದಸ್ಯರು ಪ್ರತಿಭಟನೆ ನಡೆಸುವ ಮೂಲಕ ಕರ್ನಾಟಕದ ನಡೆಯನ್ನು ಅಸಮಂಜಸ ಎಂದು ದೂರಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಖೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತವಾಗಿ ಕಾರ್ಯಾಚರಣೆಗೆ ಇಳಿದಿದ್ದು 72ಗಂಟೆಯ ಒಳಗೆ ಮಾಡಿಸಿದ ಆರ್ ಟಿಪಿಸಿಆರ್ ವರದಿ ಇಲ್ಲದವರಿಗೆ ತಲಪಾಡಿ ಗಡಿಯಲ್ಲಿ ಪ್ರವೇಶ ನಿಷೇಸುವ ಕಾರ್ಯದಲ್ಲಿ ಯಾವುದೇ ಮುಲಾಜಿಲ್ಲದೆ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ನೆಗೆಟಿವ್ ವರದಿ ಕಡ್ಡಾಯ ಎಂಬುದನ್ನು ಹೇಳಿದ್ದಾರೆ.