ಕುಂದಾಪುರ, ಆ 02 (DaijiworldNews/PY): ಕುಂದಾಪುರ ತಾಲೂಕು ಕಾಳಾವರದಲ್ಲಿ ಡ್ರೀಮ್ ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ (33) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ, ಅನೂಪ್ ಶೆಟ್ಟಿಯನ್ನು ಕುಂದಾಪುರ ಪೊಲೀಸರು ಆ.2 ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಆ.9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಪೊಲೀಸ್ ಕಸ್ಟಡಿನೀಡಬೇಕೆಂಬ ಅಭಿಯೋಜನೆ ಪರ ವಾದ ಆಲಿಸಿದ 1ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶ ನಾಗರತ್ನಮ್ಮ ಆರೋಪಿಯನ್ನು ಆ.9 ಸೋಮವಾರ ತನಕ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದು ಅಭಿಯೋಜನೆ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.
ಆರೋಪಿ ಹೆಚ್ಚಿನ ತನಿಖೆಗೆ ಗೋವಾಕ್ಕೆ:
ಕೊಲೆ ಕೃತ್ಯ ನಡೆಸುವ ಮುಂಚೆಯೇ ಫ್ಲಾನ್ ರೂಪಿಸಿದ್ದ ಆರೋಪಿ ಅನುಪ್ ಶೆಟ್ಟಿ ಗೋವಾದ ಹೊಟೇಲ್ ಒಂದರಲ್ಲಿ ಕೊಲೆಯ ಮೂರು ದಿನಗಳ ಹಿಂದೆಯೇ ರೂಮ್ ಕಾಯ್ದಿರಿಸಿದ್ದ ಹಾಗೂ ಕಾರಿನಲ್ಲಿ ಜಿ.ಪಿಎಸ್ ಇದ್ದು ಈ ಮೂಲಕ ಪೊಲೀಸರು ಆರೋಪಿ ಜಾಡು ಹಿಡಿದಿದ್ದರು ಎನ್ನುವ ಮಾಹಿತಿಯಿತ್ತಾದರೂ ಅದು ಸುಳ್ಳು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಮಾಡಿದ ಬಳಿಕ ಅಜೇಂದ್ರ ಶೆಟ್ಟಿಯ ಚಿನ್ನದ ಚೈನ್ ಹಾಗೂ ಹೊಸ ಹೋಂಡಾ ಸಿಟಿ ಕಾರು ಸುಲಿಗೆ ಮಾಡಿ ಫೈನಾನ್ಸ್ ಎದುರೇ ತನ್ನ ಬುಲೆಟ್ ಬಿಟ್ಟು ಕಾರಿನಲ್ಲಿ ಅನೂಪ್ ಪರಾರಿಯಾಗಿದ್ದ. ಈ ಹಿಂದೆ ಮೋಜುಮಸ್ತಿಗೆ ಗೋವಾಕ್ಕೆ ಹೋಗಿಬರುತ್ತಿದ್ದ ಅನೂಪ್ ಚಲನವಲನದ ಬಗ್ಗೆ ಖಾತ್ರಿಪಡಿಸಿಕೊಂಡ ಪೊಲೀಸರ ವಿಶೇಷ ತಂಡ ಹಲವು ಕಡೆಗಳಲ್ಲಿ ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ ಹೋಂಡಾ ಸಿಟಿಕಾರು ಗೋವಾದತ್ತ ತೆರಳಿದ್ದು ತಿಳಿದಿದೆ. ಅಲ್ಲಿನ ಕೆಲವರಿಂದ ಈ ಬಗ್ಗೆ ಮಾಹಿತಿ ಪಡೆದುಕೊಳ್ಳು ಮೂಲಕ ಇನ್ನಷ್ಟು ಖಚಿತಪಡಿಸಿಕೊಂಡ ಬಳಿಕ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ತಂಡ ಆರೋಪಿಯನ್ನು ಗೋವಾದಲ್ಲಿ ಬಂಧಿಸಲು ಯಶಸ್ವಿಯಾಗಿದೆ.
ಗೋವಾದಲ್ಲಿ ಆರೋಪಿ ಸೆರೆಸಿಕ್ಕಿದ್ದು ಇನ್ನೂ ಹೆಚ್ಚಿನ ತನಿಖೆ ಅಗತ್ಯವಿರುವ ಕಾರಣ ಆತನನ್ನು ಇಂದೇ ಪೊಲೀಸರ ತಂಡ ಗೋವಾಕ್ಕೆ ಕರೆದೊಯ್ಯಲಿದೆ. ಆರೋಪಿ ಚಿನ್ನದ ಚೈನ್ ಮಾರಾಟ ಮಾಡಿದ ಬಗ್ಗೆಯೂ ಮಾಹಿತಿಯಿದ್ದು, ಅದರ ಬಗ್ಗೆ ತನಿಖೆ ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ವಶಪಡಿಸಿಕೊಳ್ಳುವ ಪ್ರಕ್ರಿಯೆ ಸೇರಿ ಮುಂದಿನ ದಿನದಲ್ಲಿ ಹಲವು ಆಯಾಮದಲ್ಲಿ ತನಿಖೆಗಳು ನಡೆಯಲಿದೆ.
ಕುಂದಾಪುರ ತಾಲೂಕು ಕಾಳಾವರ ಸಳ್ವಾಡಿಯ ಪೈನಾನ್ಸ್ನಲ್ಲಿಯೇ ಸಂಸ್ಥೆಯ ಪಾಲುದಾರನನ್ನು ಕೊಲೆ ಮಾಡಿದ ಘಟನೆ ಜು.30ರಂದು ರಾತ್ರಿ ನಡೆದಿದ್ದು, ಅಜೇಂದ್ರ ಶೆಟ್ಟಿ ರಾತ್ರಿಯಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು, ಸ್ನೇಹಿತರು ಹುಡುಕಾಟ ನಡೆಸಿ, ರಾತ್ರಿ 11.20ರ ಸುಮಾರಿಗೆ ಫೈನಾನ್ಸ್ ಹತ್ತಿರ ಬಂದು ನೋಡಿದಾಗ ಫೈನಾನ್ಸ್ ಕಚೇರಿ ಶೆಟರ್ ಹಾಕಿದ ಸ್ಥಿತಿಯಲ್ಲಿ ಇತ್ತು. ಶೆಟರ್ ತೆಗೆದು ನೋಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಶೆಟ್ಟಿ ಪತ್ತೆಯಾಗಿದ್ದು, ತಕ್ಷಣ ಅಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಅಜೇಂದ್ರ ಕೊನೆಯುಸಿರೆಳೆದಿದ್ದರು.