ಮಂಗಳೂರು, ಅ29(SS): ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾದ ಮೆರವಣಿಗೆಯು ಅ.19ರಂದು ಸಂಜೆ ಶ್ರೀ ಕ್ಷೇತ್ರದ ರುವಾರಿ ಬಿ. ಜನಾರ್ದನ ಪೂಜಾರಿಯ ನೇತೃತ್ವದಲ್ಲಿ ನಡೆಯಲಿದೆ.
ಶಾರದಾಂಬೆಯ ಉತ್ಸವ ಮೂರ್ತಿಯೊಂದಿಗೆ ನವದುರ್ಗೆಯರು, ಗಣಪತಿ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ. ಅ.19ರಂದು ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರದಿಂದ ಹೊರಡುವ ಶೋಭಾ ಯಾತ್ರೆಯು ಮಣ್ಣಗುಡ್ಡ, ಲೇಡಿಹಿಲ್ ಸರ್ಕಲ್, ಪಿವಿಎಸ್ ಸರ್ಕಲ್, ನವಭಾರತ್ ಸರ್ಕಲ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಸರಕಾರಿ ಕಾಲೇಜು ವೃತ್ತದಿಂದ ಹೈಸ್ಕೂಲ್ ರಸ್ತೆಯಾಗಿ ಶ್ರೀ ವೆಂಕರಮಣ ದೇಗುಲದ ಮುಂಭಾಗವಾಗಿ ಕಾರ್ಸ್ಟ್ರೀಟ್, ಅಳಕೆಯಾಗಿ ಸಾಗಿ ಶನಿವಾರ ಮುಂಜಾನೆ ಶ್ರೀ ಕ್ಷೇತ್ರದಲ್ಲಿ ಶಾರದಾ ವಿಸರ್ಜನೆ ಮಾಡಲಾಗುತ್ತದೆ.
ಈ ಭವ್ಯ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಮಿಕ್ಕಿ ಟ್ಯಾಬ್ಲೋಗಳಿದ್ದು, ಇದು ದಸರಾ ಮೆರವಣಿಗೆಗೆ ಮೆರಗು ನೀಡಲಿದೆ. ವಿಭಿನ್ನ ಶೈಲಿಯ ಈ ಟ್ಯಾಬ್ಲೋಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬ ನೀಡಲಿದೆ. ಶ್ರೀ ಕ್ಷೇತ್ರದಲ್ಲಿ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ. ದಸರಾ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರವು ದೀಪಾಲಂಕಾರಗೊಂಡಿದೆ.
ಮೆರವಣಿಗೆ ಹೊರಡುವ ಸುಮಾರು 9 ಕಿ.ಮೀ. ಉದ್ದದ ರಸ್ತೆಯ ಇಕ್ಕಡೆಗಳು ಕೂಡ ದೀಪದಿಂದ ಅಲಂಕೃತಗೊಂಡಿದೆ. ಶ್ರೀ ಕ್ಷೇತ್ರದ ಮೂಲಗಳ ಪ್ರಕಾರ ಸುಮಾರು 20ಲಕ್ಷಕ್ಕೂ ಅಧಿಕ ಬಲ್ಬ್ಗಳನ್ನು ಬಳಸಲಾಗಿದೆ. ಅದಲ್ಲದೆ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಸಿಂಗರಿಸಲಾಗಿದೆ.
ಮಂಗಳೂರಿನಲ್ಲಿ ನಡೆಯುವ ಈ ವಿಜೃಂಭಣೆಯ ದಸರಾ ಉತ್ಸವದ ಆಕರ್ಷಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬರುತ್ತಾರೆ.