ಬೆಂಗಳೂರು, ಅ18(SS): ನಮ್ಮ ಸಂಸ್ಕೃತಿಗಳು ಮುಂದುವರಿಯಲಿ. ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡುವುದು ಉತ್ತಮವಲ್ಲ ಎಂದು ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶಬರಿಮಲೆ ಕುರಿತು ನನ್ನ ಮಾತನ್ನು ಸಿಎಂ ಆಗಿ ಹೇಳುತ್ತಿಲ್ಲ, ಅದು ವೈಯಕ್ತಿಕ ಅಭಿಪ್ರಾಯವಾಗಿ ವ್ಯಕ್ತಪಡಿಸುತ್ತಿದ್ದಾನೆ. ಸದ್ಯ ಅಗೋಚರ ಶಕ್ತಿಗಳ ವಿರುದ್ಧ ನಾವು ಸಂಘರ್ಷ ಮಾಡುವ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ ಇದೀಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಈ ಹಿಂದೆ ನಡೆದುಕೊಂಡು ಬಂದಿರುವ ಹಾಗೆಯೇ ನಡೆದುಕೊಂಡು ಹೋಗಲಿ. ನಮ್ಮ ಸಂಸ್ಕೃತಿಗಳು ಮುಂದುವರಿಯಲಿ. ಆದರೆ ನಮ್ಮಲ್ಲಿ ಕೆಲ ಮುಂದುವರಿದ ಮಂದಿ ಎಲ್ಲವನ್ನೂ ಮೌಢ್ಯ ಎನ್ನುತ್ತಾರೆ. ಆದರೆ ನಮ್ಮ ಎಲ್ಲಾ ಹಬ್ಬ ಹರಿದಿನ ಊಟ ವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ವೈಜ್ಞಾನಿಕ ಕಾರಣವಿದೆ. ಇಂದು ನಡೆಯುತ್ತಿರುವ ವಿಕೋಪ ತಡೆಯಲು ಆಧುನಿಕ ತಂತ್ರಜ್ಞಾನ ಮತ್ತಷ್ಟು ಮುಂದುವರಿಯಬೇಕಿದೆ. ಇದು ನನ್ನ ಅಭಿಪ್ರಾಯ ಮಾತ್ರ. ಇದನ್ನು ಮತ್ತೊಬ್ಬರ ಮೇಲೆ ಒತ್ತಾಯ ಪೂರ್ವಕವಾಗಿ ಹಾಕುತ್ತಿಲ್ಲ ಎಂದು ಹೇಳಿದ್ದಾರೆ.
ವೈಜ್ಞಾನಿಕವಾಗಿ ನಾವು ಬಹಳ ಮುಂದೆ ದಾಪುಗಾಲು ಇಟ್ಟು ಮುಂದೆ ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರ ಲೋಕದಲ್ಲಿ ವಾಸ ಮಾಡುವ ವ್ಯವಸ್ಥೆ ಮಾಡುವ ಆಶ್ವಾಸನೆಯನ್ನು ವಿಜ್ಞಾನಿಗಳು ನೀಡುತ್ತಿದ್ದಾರೆ. ಆದರೆ ಸಾಕಷ್ಟು ಮುಂದುವರಿದರೂ ಯಾವುದಕ್ಕೂ ಪ್ರಕೃತಿ ವಿಕೋಪಗಳನ್ನು ತಡೆಯಲಾಗುತ್ತಿಲ್ಲ. ನನ್ನ ನಿಲುವು ಎಂಬುದಕ್ಕಿಂತ ನಮ್ಮ ಸಂಸ್ಕೃತಿಯನ್ನು ಪೂರ್ವಿಕರು ಮಾಡುವಾಗ ಅವರದ್ದೇ ಉದ್ದೇಶಗಳು ಇರುತ್ತವೆ. ಇದೀಗ ಆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.