ಪುತ್ತೂರು, ಅ 18(SM): ಪುತ್ತೂರಿನ ಪೋಳ್ಯದ ನಾರಾಯಣ ಪ್ರಸಾದ್ ಎಂಬವರ ಮನೆಯಲ್ಲಿ ನಡೆದಂತಹ ನಾಡಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಪೊಲೀಸರು ಮೂರು ತಂಡಗಳನ್ನು ರಚಿಸಲಾಗಿದೆ. 2 ತಂಡಗಳು ಕೇರಳಕ್ಕೆ ತೆರಳಿ ತನಿಖೆ ನಡೆಸಲಿವೆ.
ಪೋಳ್ಯದ ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ಅಕ್ಟೋಬರ್ ೧೬ರಂದು ಮುಂಜಾನೆ ವೇಳೆಗೆ ದುಷ್ಕರ್ಮಿಗಳು ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದರು. ಹಾಗೂ ಅದರಲ್ಲಿ ಒಂದು ನಾಡ ಬಾಂಬ್ ಸ್ಪೋಟಗೊಂಡು ನಾರಾಯಣ ಅವರ ಪತ್ನಿಗೆ ಗಂಭೀರ ಗಾಯವಾಗಿತ್ತು. ಅಲ್ಲದೆ ಮನೆ ಬಾಗಿಲಿಗೆ, ಗೋಡೆಗೆ ಹಾನಿ ಸಂಭವಿಸಿತ್ತು.
ಆರೋಪಿಗಳು ಒಟ್ಟು ಮೂರು ಬಾಂಬ್ ಗಳನ್ನು ಬಳಕೆ ಮಾಡಿದ್ದು, ಇನ್ನೆರಡು ಬಾಂಬ್ ಸ್ಪೋಟಿಸದೇ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಈ ಕೃತ್ಯದ ಹಿಂದೆ ಇದೇ ಮನೆಯಲ್ಲಿ ಹಿಂದೆ ಕೆಲಸಕ್ಕಿದ್ದ ವ್ಯಕ್ತಿ ಕೃತ್ಯ ನಡೆಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಈ ಆಧಾರದಲ್ಲೂ ತನಿಖೆ ನಡೆಸಲಾಗುತ್ತಿದೆ. ಇದರೊಂದಿಗೆ ಬೇರೆ ಆಯಾಮದಲ್ಲೂ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಎಸ್ಪಿ ಡಾ. ರವಿಕಾಂತೇ ಗೌಡ ಡಿವೈಎಸ್ಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.