ಕಾಸರಗೋಡು, ಅ 18(SM): ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್ನ ಆದೇಶವನ್ನು ಅನುಷ್ಠಾನಗೊಳಿಸಲು ಕೇರಳ ಸರಕಾರ ಮುಂದಾಗಿರುವುದನ್ನು ಪ್ರತಿಭಟಿಸಿ ಕರೆ ನೀಡಲಾಗಿರುವ ಕೇರಳ ಹರತಾಳ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಕಾಸರಗೋಡಿನಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವೇ ಕೆಲವೇ ಕೆಲವು ಖಾಸಗಿ ವಾಹನಗಳು ರಸ್ತೆಗಳಲ್ಲಿ ಸಂಚರಿಸುತ್ತಿವೆ. ಜಿಲ್ಲೆಯಲ್ಲಿ ವರ್ತಕರೂ ಕೂಡ ಬಂದ್ ಗೆ ಬೆಂಬಲ ಸೂಚಿಸಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಶಬರಿಮಲೆ ಸಂರಕ್ಷಣಾ ಸಮಿತಿ ಮತ್ತು ಅಂತರ್ರಾಷ್ಟ್ರೀಯ ಹಿಂದೂ ಪರಿಷತ್ ಗುರುವಾರದಂದು ಕೇರಳದಲ್ಲಿ 24 ಗಂಟೆಗಳ ಹರತಾಳಕ್ಕೆ ಕರೆ ನೀಡಿದ್ದು, ಇದಕ್ಕೆ ಬಿಜೆಪಿ ಕೂಡ ಬೆಂಬಲವನ್ನು ನೀಡಿದೆ. ಶಬರಿಮಲೆ ಪ್ರದೇಶದಲ್ಲಿ ನಿನ್ನೆಯಿಂದಲೇ ಆಕ್ರೋಶ ತೀವ್ರಗೊಂಡಿದೆ. ಪೊಲೀಸರು ಭಕ್ತರ ನಡುವೆ ಸಂಘರ್ಷಗಳೂ ಕೂಡ ನಡೆದಿದೆ.
ಹರತಾಳದ ಹಿನ್ನೆಲೆಯಲ್ಲಿ ಮಂಜೇಶ್ವರದಲ್ಲಿ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಕಲ್ಲೆಸೆದ ಘಟನೆ ನಡೆದಿದೆ. ಈ ಸಂದರ್ಭ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.
ತೃಕ್ಕನ್ನಾಡ್ ನಲ್ಲಿ ಹರತಾಳ ಬೆಂಬಲಿಗರು ವಾಹನಗಳನ್ನು ತಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇವುಗಳನ್ನು ಹೊರತುಪಡಿಸಿ ಜಿಲ್ಲೆಯ ಹಲವೆಡೆ ಸಂಚಾರಕ್ಕೆ ತಡೆಯೊಡ್ಡಿದ ಘಟನೆಗಳು ಕೂಡ ನಡೆದಿದೆ. ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ರಸ್ತೆ ಸಂಚಾರ ಬಂದ್ ಮಾಡಿದ ಪ್ರಸಂಗಗಳು ಕೂಡ ಜಿಲ್ಲೆಯಲ್ಲಿ ನಡೆಯುತ್ತಿದೆ.
ಈ ನಡುವೆ ಪೊಲೀಸರು ಎಲ್ಲೆಡೆ ಕಟ್ಟೆಚ್ಚರವನ್ನು ವಹಿಸಿದ್ದಾರೆ.